ಬೇಲೂರು: ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹಾಗೂ ಅರೇಹಳ್ಳಿ ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ 35 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಸಾರ್ವಜನಿಕ ಗ್ರಂಥಾಲಯವನ್ನು ಅಭಿವೃದ್ಧಿ ನೆಪದಲ್ಲಿ ನೆಲಸಮ ಮಾಡಲಾಗಿದೆ ಎಂದು ಅರೇಹಳ್ಳಿ ಗ್ರಾಮದ ಪಾಲಕ್ಷ ದೂರಿದರು.
ಅರೇಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಅಭಿವೃದ್ಧಿ ಹೆಸರಿನಲ್ಲಿ 2025-26 ನೇ ಸಾಲಿನ ಅನುದಾನದಲ್ಲಿ 20 ಲಕ್ಷ ರೂ. ಮೀಸಲಿರಿಸಿದೆ. ಆದರೆ ಹಳೆ ಗ್ರಂಥಾಲಯದ ಕಟ್ಟಡ ಕೆಡವಿ ನಂತರ ಹೊಸ ಗ್ರಂಥಾಲಯ ಕಟ್ಟಡ ನಿರ್ಮಿಸಲು ಅನುಮತಿ ಪಡೆದಿರುವ ಗ್ರಾಪಂ ಅಧಿಕಾರಿಗಳು ಮಾತ್ರ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಆದರೆ ಇಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಸಹ ಯಾವುದೇ ಗುಣಮಟ್ಟ ಹೊಂದಿಲ್ಲ. ಕಾಮಗಾರಿ ಪ್ರಾರಂಭವಾದ ಕೇವಲ 21 ದಿನಗಳಲ್ಲಿ ಪೂರ್ಣಗೊಂಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರಂಥಾಲಯದ ಹೆಸರಿನಲ್ಲಿ ವಾಣಿಜ್ಯ ಮಳಿಗೆಗಳನ್ನು ಅವೈಜ್ಞಾನಿಕವಾಗಿ ಪೂರ್ಣಗೊಳಿಸಿದ್ದಾರೆ. ಅಲ್ಲದೆ ಉದ್ಘಾಟನೆ ಮಾಡದೆ ಬಹಿರಂಗ ಹರಾಜಿಗೆ ಸಜ್ಜಾಗಿದ್ದಾರೆ. ಈ ಬಗ್ಗೆ ಶಾಸಕರು ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.