ತಾಲೂಕು ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಗಾರದ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಶಾಸಕ ಎಚ್.ಕೆ.ಸುರೇಶ್, ಪ್ರಾಧ್ಯಾಪಕಿ ತಮಿಳ್ ಸೆಲ್ವಿ ಇತರರು ಇದ್ದರು.
ಬೇಲೂರು: ಮಹಿಳೆಯರ ಅಭಿವೃದ್ಧಿಯಲ್ಲಿ ಶಿಕ್ಷಣ ಮತ್ತು ಅರಿವು ಅತ್ಯಂತ ಮುಖ್ಯವಾಗಿದ್ದು, ಶೈಕ್ಷಣಿಕ ಕಾರ್ಯಾಗಾರಗಳು ಅವರ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ಶಾಸಕ ಎಚ್.ಕೆ.ಸುರೇಶ್ ಹೆಳಿದರು.
ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆಯಲ್ಲಿ ತೊಡಗಿರುವುದು ಶ್ಲಾಘನೀಯ. ಅಲ್ಲದೆ ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಸಂತೋಷದ ವಿಚಾರ. ಮಹಿಳೆಯರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗವಾಗಬೇಕಿದೆೆ ಎಂದರು.
ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ.ತಮಿಳ್ ಸೆಲ್ವಿ ಮಾತನಾಡಿ, ಮಹಿಳೆಯರು ಸಮಾನ ಹಕ್ಕುಗಳು, ಸ್ಥಾನಮಾನ ಮತ್ತು ಜವಾಬ್ದಾರಿಗಳನ್ನು ಆತ್ಮಗೌರವದಿಂದ ಕೇಳಿಕೊಳ್ಳುವ ದಿನವೇ ಮಹಿಳಾ ದಿನಾಚರಣೆ. ಇದು ಪುರುಷರನ್ನು ವಿರೋಧಿಸುವುದಕ್ಕಲ್ಲ. ಸಮಾನತೆಯ ಹೋರಾಟದ ಸಂಕೇತವಾಗಿದೆ. ಅಮೆರಿಕದ ನ್ಯೂಯಾರ್ಕ್‌ನ ಕಾರ್ಖಾನೆಯ ಮಹಿಳಾ ಕಾರ್ಮಿಕರು ಸಮಾನ ಸಂಬಳ ಹಾಗೂ ಕೆಲಸದ ಅವಧಿಗಾಗಿ ಹೋರಾಟ ನಡೆಸಿದ್ದು, ಮಹಿಳಾ ಹಕ್ಕುಗಳ ಚಳವಳಿಗೆ ಮಹತ್ವದ ತಿರುವು ನೀಡಿತು. ಮಹಿಳಾ ದಿನಾಚರಣೆಯನ್ನು ಕೆಲವರು ತಪ್ಪಾಗಿ ಅರ್ಥೈಸುತ್ತಿರುವುದು ವಿಷಾದನೀಯ. ಪ್ರಕೃತಿ, ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾದರೂ ಸಮಾನ ಜವಾಬ್ದಾರಿಗಳನ್ನು ನೀಡಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಮರ್ಥಳಿದ್ದು, ಆದರೂ ಕೆಲ ಸಂದರ್ಭಗಳಲ್ಲಿ ತಮ್ಮ ಸ್ವಾತಂತ್ರ್ಯ ಮತ್ತು ಸ್ವಾಭಿಮಾನವನ್ನು ತ್ಯಜಿಸಬೇಕಾದ ಪರಿಸ್ಥಿತಿ ಇಂದಿಗೂ ಮುಂದುವರಿದಿದೆ ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಕೃಷ್ಣೇಗೌಡ, ತಾಲೂಕು ಅಧ್ಯಕ್ಷ ಆರ್.ಮಂಜುನಾಥ್, ಕಾರ್ಯದರ್ಶಿ ಡಾ.ಲಕ್ಷ್ಮೀಕಾಂತ್, ತಾಲೂಕು ಕಾರ್ಯದರ್ಶಿ ಧಮೇಗೌಡ, ಖಜಾಂಚಿ ಸಂತೋಷ್, ಹಿರಿಯ ಉಪಾಧ್ಯಕ್ಷ ಪೂರ್ಣೇಶ್, ದಯಾನಂದ್, ತಾಪಂ ಇಒ ಸತೀಶ್ ಕುಮಾರ್, ಬಿಇಒ ಭಾಗ್ಯಮ್ಮ, ಶಿಶು ಅಭಿವೃದ್ಧಿ ಅಧಿಕಾರಿ ಇಂಪಾ, ಆರ್‌ಎಫ್‌ಒ ಎ.ಎಚ್.ಶೈಲಾ, ಅರೇಹಳ್ಳಿ ಪಿಎಸ್‌ಐ ಶೋಭಾ, ಉಪ ಖಜಾನೆ ಅಧಿಕಾರಿ ಎಂ.ಪಿ.ವೀಣಾ, ಡಾ.ಜಯಲಕ್ಷ್ಮೀ ನಾಯಕ್, ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜು ಪ್ರಾಂಶುಪಾಲೆ ವೀಣಾ ಸೇರಿದಂತೆ ಇತರರಿದ್ದರು.