ಹಾಸನದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಎಲ್. ಮಲ್ಲೇಶಗೌಡ, ಎಚ್.ಪಿ.ಮೋಹನ್, ಎನ್.ವಿ. ಗಿರೀಶ್, ಏಡುಕೊಂಡಲು, ಉಮೇಶ್ ಹೊಸಹಳ್ಳಿ, ಎಚ್.ಜಿ. ಶಿವಾನಂದಮೂರ್ತಿ, ಡಾ.ಕೆ.ಎಸ್. ಹರಶಿವಮೂರ್ತಿ, ಸುರೇಶ್ ಇತರರಿದ್ದರು.
- ಚಿಂತನಾ ಸಮಾವೇಶಗಳು ಹೆಚ್ಚಾಗಿ ನಡೆಯಲಿ
- ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಎಚ್.ಎಲ್.ಮಲ್ಲೇಶಗೌಡ ಅಭಿಮತ
ಹಾಸನ: ಪ್ರಸ್ತುತ ಸಮಾಜಕ್ಕೆ ಅಹಿಂದ, ಹಿಂದೂ ಸಮಾವೇಶಗಳೂ ಬೇಕಿಲ್ಲ. ಬದಲಾಗಿ ಭೂಮಿಯನ್ನು ಉಳಿಸುವ, ಕಾಪಾಡುವ ಮತ್ತು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಒಪ್ಪಿಸುವ ಚಿಂತನೆಯ ಸಮಾವೇಶಗಳು ಮಾತ್ರ ಹೆಚ್ಚಾಗಿ ನಡೆಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಎಚ್.ಎಲ್.ಮಲ್ಲೇಶಗೌಡ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಪಿಯು ಕಾಲೇಜುಗಳ ಕನ್ನಡ ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ವೇದಿಕೆ ಮತ್ತು ಹಾಸನ ಜಿಲ್ಲಾ ಕಸಾಪ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ನೆಲದವ್ವನಿಗೆ ಹಸಿರು ಕೌದಿ (ಕೃಷಿ, ಅರಣ್ಯ, ರೈತರ ಆಶಾಕಿರಣ)’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಬ್ಬರು ಲೇಖಕರು ಅಪಾರ ಶ್ರದ್ಧೆ, ಆಳವಾದ ಅಧ್ಯಯನ ಮತ್ತು ಬದುಕಿನ ಅನುಭವದಿಂದ ಈ ಕೃತಿಯನ್ನು ರೂಪಿಸಿದ್ದಾರೆ. ಪರಿಸರ ಚಿಂತಕ ಡಾ.ಕೆ.ಎಸ್.ಹರಶಿವಮೂರ್ತಿ ತಮ್ಮ ಸಂಪೂರ್ಣ ಸಾಹಿತ್ಯಿಕ ಅಧ್ಯಯನವನ್ನು ಈ ಕೃತಿಯಲ್ಲಿ ಧಾರೆ ಎರಿದಿದ್ದಾರೆ. ಅದೇ ರೀತಿ ಸಾಹಿತಿ ಹಾಗೂ ನಿವೃತ್ತ ಉನ್ನತ ಅರಣ್ಯಾಧಿಕಾರಿ ಎಚ್.ಜಿ. ಶಿವಾನಂದಮೂರ್ತಿ ಅವರು ತಮ್ಮ ಸೇವಾ ಅನುಭವವನ್ನು ಇಲ್ಲಿ ಸಮೃದ್ಧವಾಗಿ ಹಂಚಿಕೊಂಡಿದ್ದಾರೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಎಚ್.ಪಿ.ಮೋಹನ್ ಮಾತನಾಡಿ, ಕೃಷಿ, ಅರಣ್ಯ ಮತ್ತು ರೈತರ ಬದುಕಿನ ನಡುವಿನ ಸಂಬಂಧವನ್ನು ಸಾಹಿತ್ಯದ ಮೂಲಕ ಸುಲಭವಾಗಿ, ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ವಿಶ್ಲೇಷಿಸಿರುವುದು ಈ ಕೃತಿಯ ವೈಶಿಷ್ಟ್ಯ. ಒಬ್ಬರ ಅನುಭವ, ಮತ್ತೊಬ್ಬರ ಸಾಹಿತ್ಯಿಕ ಶಕ್ತಿ ಒಂದಾಗಿ ಸಮಾಜಕ್ಕೆ ದಿಕ್ಕು ತೋರಿಸುವ ಕೆಲಸ ಈ ಪುಸ್ತಕ ಮಾಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ತಿರುಪತಿಹಳ್ಳಿ ಶಿವಶಂಕರಪ್ಪ, ಜಿಲ್ಲಾ ಪದವಿಪೂರ್ವ ಪ್ರಾಂಶುಪಾಲರ ವೇದಿಕೆ ಅಧ್ಯಕ್ಷ ಎನ್.ವಿ. ಗಿರೀಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಪ್ರಾಂಶುಪಾಲರ ವೇದಿಕೆ ಗೌರವಾಧ್ಯಕ್ಷ ಉಮೇಶ್ ಹೊಸಹಳ್ಳಿ, ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯಾಧಿಕಾರಿ ಎಚ್.ಜಿ.ಶಿವಾನಂದಮೂರ್ತಿ, ಸಾಹಿತಿ ಡಾ. ಕೆ.ಎಸ್.ಹರಶಿವಮೂರ್ತಿ, ಸುರೇಶ್ ಇತರರಿದ್ದರು.