ಬಸವೇಶ್ವರರ ಜಯಂತಿ ಅಂಗವಾಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಸೋಮವಾರ ಮಾಲಾರ್ಪಣೆ ಸಲ್ಲಿಸಿದ ಶಾಸಕ ಎಚ್.ಕೆ.ಸುರೇಶ್ ಹಾಗೂ ವೀರಶೈವ-ಲಿಂಗಾಯತ ಮುಖಂಡರು
ಬೇಲೂರು : ಬಸವೇಶ್ವರರ ಜಯಂತಿ ಅಂಗವಾಗಿ ವೀರಶೈವ-ಲಿಂಗಾಯತ ಮಹಾಸಭಾದ ಮುಖಂಡರ ನೇತೃತ್ವದಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಶಾಸಕ ಎಚ್.ಕೆ.ಸುರೇಶ್ ಸೋಮವಾರ ಪುಷ್ಪಹಾರ ಸಲ್ಲಿಸುವ ಮುಲಕ ಗೌರವ ಸಲ್ಲಿಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಬಸವಣ್ಣನವರ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿ ದೀಪವಾಗಿವೆ. ಕಾಯಕವೇ ಕೈಲಾಸ ಎಂಬ ಮಹತ್ವದ ಸಂದೇಶ ನೀಡಿದ ಬಸವಣ್ಣ ಅವರು ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಸಮಾನತೆ ಸಾರಿದ ಮಹಾನ್ ಪುರುಷರು. ಅವರು ಅನುಭವ ಮಂಟಪದ ಮೂಲಕ ಸಮಾಜದಲ್ಲಿ ಪ್ರಜಾಪ್ರಭುತ್ವದ ಚಿಂತನೆಗಳನ್ನು ಬಿತ್ತಿದವರು. 12ನೇ ಶತಮಾನದಲ್ಲೇ ಇಂದಿನ ಸಂಸತ್ತಿನ ಮಾದರಿಯಲ್ಲೇ ಅನುಭವ ಮಂಟಪ ನಿರ್ಮಿಸಿ ಎಲ್ಲ ವರ್ಗದವರಿಗೂ ಲಿಂಗಭೇದ ಮರೆತು ಸಮಾನ ಅವಕಾಶ ಕಲ್ಪಿಸಿದವರು. ಬಸವಣ್ಣನವರ ಆದರ್ಶ ತತ್ವ ಸಿದ್ಧಾಂತಗಳು ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾಗಿವೆ. ನಾವುಗಳೆಲ್ಲರೂ ಬಸವಣ್ಣನ ಕಾಯಕವೇ ಕೈಲಾಸ ಎಂಬ ತತ್ವವನ್ನು ಅರಿತು ಕೆಲಸ ಮಾಡುವ ಮೂಲಕ ಬಸವಣ್ಣರಿಗೆ ಕೀರ್ತಿ ತರುವ ಕೆಲಸ ಮಾಡಬೇಕಿದೆ ಎಂದರು.
ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜು ಮಾತನಾಡಿ, ಬಸವಣ್ಣ ಸಮಾಜದಲ್ಲಿ ಸಮಾನತೆ, ಶ್ರಮಕ್ಕೆ ಗೌರವ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತಿದ ಮಹಾನ್ ಚಿಂತಕರು. ಕಾಯಕವೇ ಕೈಲಾಸ ಎಂಬ ಅವರ ಮಹತ್ವದ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ಜಯಂತಿ ಆಚರಣೆ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರು ಅವರ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಅಲ್ಲದೆ ಅನುಭವ ಮಂಟಪದ ಮೂಲಕ ಬಸವಣ್ಣ ಜಾತಿಗಳೆನ್ನದೆ ಎಲ್ಲರೂ ಸಮಾನರು ಎಂಬುದನ್ನು ಸಾರಿ ಎಲ್ಲ ವರ್ಗದವರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನಾಯಕರಾಗಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ವೀರಶೈವ ಮುಖಂಡರಾದ ಗ್ರಾನೈಟ್ ರಾಜಶೇಖರ್, ಬಲ್ಲೇನಹಳ್ಳಿ ರವಿಕುಮಾರ್, ವಿಕ್ರಂ ಕೌರಿ, ಅದ್ದೂರಿ ಕುಮಾರ್, ಗೆಂಡೇಹಳ್ಳಿ ಚೇತನ್, ವಿರುಪಾಕ್ಷ, ಮದನ್, ಯೋಗೇಶ್, ಉಮೇಶ್, ವಿಂಪು ಸಂತೋಷ್, ಲಕ್ಷ್ಮೀ, ನಾಗೇಶ್, ಪುರಸಭೆ ಸದಸ್ಯರಾದ ಜಮಾಲ್, ತೀರ್ಥಕುಮಾರಿ, ಜಗದೀಶ್, ಅರುಣ್ ಕುಮಾರ್ ಇತರರಿದ್ದರು.