ಬೇಲೂರು ಪಟ್ಟಣದ ಪೇಟೆ ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ಆರ್ಯವೈಶ್ಯ ಸಮಾಜದಿಂದ ಮಹಾಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಲಕ್ಷ್ಮೀ ಗುರುರಾಜ್, ಕೆ.ಎಲ್.ಎನ್.ಬಾಬು ಇತರರು ಇದ್ದರು.
ಡಿಸೆಂಬರ್‌ನಲ್ಲಿ ಆರ್ಯವೈಶ್ಯ ಸಮಾಜದ ಶಕ್ತಿ, ಪ್ರತಿಭೆ ಹಾಗೂ ಉದ್ಯಮಶೀಲವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಸಮಾಜದ ಪ್ರತಿಷ್ಠಿತ ಜಿಎವಿಎಸ್ (ಗ್ಲೋಬಲ್ ಎಕ್ಸಲರೇಟರ್ ವಿಷನ್ ಸಮ್ಮಿಟ್) ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಿ ಎಂದು ವಾಸವಿ ವನಿತಾ ಸಂಘದ ಅಧ್ಯಕ್ಷೆ ಲಕ್ಷ್ಮೀ ಗುರುರಾಜ್ ತಿಳಿಸಿದರು.
ಪಟ್ಟಣದ ಪೇಟೆ ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ಆರ್ಯವೈಶ್ಯ ಸಮಾಜದಿಂದ ಡಿ.25, 26 ಮತ್ತು 27ರಂದು ಆಯೋಜಿಸಿರುವ ಸಮಾಜದ ಪ್ರತಿಷ್ಠಿತ ಜಿಎವಿಎಸ್ ಕಾರ್ಯಕ್ರಮದ ಯಶಸ್ಸಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಮಹಾಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿಯ ಜಿಎವಿಎಸ್ ಕಾರ್ಯಕ್ರಮ ಆಯೋಜಿಸಲು ನಮಗೆ ಅವಕಾಶ ಸಿಕ್ಕಿದ್ದು ಇದನ್ನು ಯಶಸ್ವಿಗೊಳಿಸುವ ಮೂಲಕ ಅವಕಾಶವನ್ನು ಸಲ್ಲರೂ ಸದ್ಬಳಕೆ ಮಾಡಿಕೊಳ್ಳೋಣ ಎಂದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಡಿ.ಅಶೋಕ್ ಮಾತನಾಡಿ, ವ್ಯಾಪಾರ ಮತ್ತು ಉದ್ಯಮವೇ ನಮ್ಮ ಆರ್ಯವೈಶ್ಯರ ನಾಡಿ ಮಿಡಿತವಾಗಿದೆ. ಆದರೆ ಈಗಿನ ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ವ್ಯವಹಾರವನ್ನು ಸಮರ್ಥವಾಗಿ ನಿರ್ವಹಿಸಲು ಹಾಗೂ ಸಮಾಜಕ್ಕೆ ಭದ್ರ ಬುನಾದಿ ಹಾಕಿ ಮುಂದಿನ ಭವಿಷ್ಯ ರೂಪಿಸಲು ಜಿಎವಿಎಸ್ ಮಹತ್ವದ ವೇದಿಕೆಯಾಗಲಿದೆ ಎಂದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಕೆ.ಎಲ್.ಎನ್.ಬಾಬು ಮಾತನಾಡಿ, ಜಿಎವಿಎಸ್ ಜಾಗತಿಕ ಮಟ್ಟದ ಉದ್ಯಮಿಗಳು ಹಾಗೂ ಸಮಾಜದ ಪ್ರಾಜ್ಞರನ್ನು ಒಂದೇ ವೇದಿಕೆಯಲ್ಲಿ ಸೇರಿಸಲಿದೆ. ವ್ಯಾಪಾರ, ಉದ್ಯಮ ಹಾಗೂ ಸಮಾಜದ ಅಭಿವೃದ್ಧಿಗೆ ಅಗತ್ಯ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗುವುದು. ಪ್ರತಿಯೊಬ್ಬರೂ ಶೃಂಗಸಭೆಯ ಸದುಪಯೋಗ ಪಡೆಯಬೇಕು ಎಂದರು.
ಆರ್ಯವೈಶ್ಯ ಮಂಡಳಿ ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಸುಧೀಂದ್ರ, ನಿರ್ದೇಶಕರಾದ ಎಚ್.ವಿ.ರವೀಂದ್ರನಾಥ್, ಆನಂದ್, ಪ್ರಶಾಂತ್, ಸಮಾಜದ ರಮೇಶ್ ಗುಪ್ತ, ವೆಂಕಟೇಶ್, ರಾಜಶೇಖರ್, ಸುಧಾ ರಾಜಶೇಖರ್, ಸೂರ್ಯನಾರಾಯಣ, ಯುವಜನ ಸಂಘದ ಚಿ.ಆಕಾಶ್, ಹಿರಿಯ ಸದಸ್ಯೆ ಪಂಚರತ್ನಮ್ಮ ಇತರರಿದ್ದರು.