ಹಾಸನ ನಗರದ ಆರ್.ಸಿ.ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ರಿಬ್ಬನ್ ಘಟಕದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಎಚ್‌ಐವಿ/ಏಡ್ಸ್ ಜಾಗೃತಿ ಮತ್ತು ತಡೆಗಟ್ಟುವಿಕೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಿ.ಎಂ. ರವಿ ಕುಮಾರ್, ಡಿ.ಕೆ.ಮಂಜಯ್ಯ, ಪಿ.ನಂದನ್ , ಐಕ್ಯುಎಸಿ ಸಂಚಾಲಕ ಜಿ.ಆರ್. ಮೋಹನ್ ಇತರರಿದ್ದರು. 
ಹಾಸನ

ಯುವಜನರಿಗೆ ಆರೋಗ್ಯ ಕಾಳಜಿಯಿರಲಿ

ಪ್ರಮುಖ ಮುಖ್ಯಾಂಶಗಳು

  • ಯುವಜನರಿಗೆ ಆರೋಗ್ಯ ಕಾಳಜಿಯಿರಲಿ
  • ಡಿಎಪಿಸಿಯು ಜಿಲ್ಲಾ ಮೇಲ್ವಿಚಾರಕ ಬಿ.ಎಂ.ರವಿಕುಮಾರ್ ಸಲಹೆ
  • ಎಚ್‌ಐವಿ, ಏಡ್ಸ್ ಜಾಗೃತಿ ಉಪನ್ಯಾಸ
ಹಾಸನ: ಯುವತಿಯರು ಹದಿಹರೆಯದ ವಯಸ್ಸಿನಲ್ಲಿ ಜಾಗೃತಿಯಿಂದ ಇರುವುದರ ಜತೆಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಿಎಪಿಸಿಯು ವಿಭಾಗದ ಜಿಲ್ಲಾ ಮೇಲ್ವಿಚಾರಕ ಬಿ.ಎಂ.ರವಿ ಕುಮಾರ್ ಹೇಳಿದರು.
ನಗರದ ಆರ್.ಸಿ.ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ರಿಬ್ಬನ್ ಘಟಕದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಎಚ್‌ಐವಿ/ಏಡ್ಸ್ ಜಾಗೃತಿ ಮತ್ತು ತಡೆಗಟ್ಟುವಿಕೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯುವತಿಯರು ಕೇವಲ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಒತ್ತು ನೀಡುವುದರ ಜತೆಗೆ ಆರೋಗ್ಯದ ಬಗ್ಗೆ ಕಾಳಜಿ ಹೊಂದಬೇಕು. ಎಚ್‌ಐವಿ ದೇಶದಾದ್ಯಂತ ಹೆಚ್ಚಾಗಿ ಹರಡುತ್ತಿದ್ದು, ಯುವಜನರು ಈ ಕಾಯಿಲೆ ಬಗ್ಗೆ ಹೆಚ್ಚು ಅರಿವು ಹೊಂದುವ ಮೂಲಕ ಈ ಕಾಯಿಲೆಗಳಿಂದ ದೂರವಿರುವ ಪ್ರಯತ್ನ ಮಾಡಬೇಕು. ಓದುವುದರ ಜತೆ ಜತೆಗೆ ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿದರೆ ತಮ್ಮ ಸಾಧನೆಗೆ ಪೂರಕವಾಗಲಿದೆ. ಯುವಕರು ಹೆಚ್ಚಾಗಿ ಎಚ್‌ಐವಿ ಕಾಯಿಲೆಗೆ ತುತ್ತಾಗುತ್ತಿದ್ದು, ಹದಿಹರೆಯದ ವಯಸ್ಸಿನಲ್ಲಿ ಎಚ್ಚರಿಕೆಯಿಂದ ಮುಂಜಾಗ್ರತ ಕ್ರಮಗಳನ್ನು ಪಾಲನೆ ಮಾಡಬೇಕಾದ ಅವಶ್ಯಕತೆ ಇದೆ. ಹಾಗಾಗಿ ಯುವಕರು ತಮ್ಮ ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಮಂಜಯ್ಯ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ನಿಗದಿತ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು. ಯುವಕರು ಸಾಧನೆಯ ಹಾದಿಯಲ್ಲಿ ಸಾಗಬೇಕಾದರೆ ತಮ್ಮ ತಂದೆ, ತಾಯಿ ಸಲಹೆ ಮಾರ್ಗದರ್ಶನ ಹಾಗೂ ಆಶೀರ್ವಾದ ಪಡೆದುಕೊಳ್ಳಬೇಕು ಎಂದು ಹೇಳಿದರು.
ರೆಡ್ ರಿಬ್ಬನ್ ಘಟಕದ ಸಂಚಾಲಕ ಪಿ.ನಂದನ್, ಐಕ್ಯುಎಸಿ ಸಂಚಾಲಕ ಜಿ.ಆರ್. ಮೋಹನ್ ಇತರರು ಇದ್ದರು.