ಹಾಸನ ಜಿಲ್ಲಾ ಎಸ್‌ಎಸ್‌ಎಫ್ ಘಟಕದ ಆಶ್ರಯದಲ್ಲಿ ಹಲಸುಲಿಗೆ ಗ್ರಾಮದ ಹಜ್ರತ್ ಸೈಯದ್ ಜಲಾಲುದ್ದಿನ್ ದರ್ಗಾದ ಆವರಣದಲ್ಲಿ ಆಯೋಜಿಸಿದ್ದ 14ನೇ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಗಳಿಸಿದ ಸಕಲೇಶಪುರ ಘಟಕ. 
ಹಾಸನ

ಧರ್ಮದ ಹೆಸರಿನಲ್ಲಿ ಸಾಮರಸ್ಯ ಮೂಡಿಸುವ ಕೆಲಸವಾಗಲಿ

ಪ್ರಮುಖ ಮುಖ್ಯಾಂಶಗಳು

  • religion

ಸಕಲೇಶಪುರ:

ವಿದ್ಯಾರ್ಥಿಗಳು ಸಾಹಿತ್ಯ, ಶಿಕ್ಷಣ ಹಾಗೂ ಸೃಜನಶೀಲ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಸೌಹಾರ್ದ, ಪ್ರೀತಿ ಮತ್ತು ಶಾಂತಿಯ ಸಂದೇಶ ಸಾರುವ ಜವಾಬ್ದಾರಿಯುತ ಯುವಕರಾಗಿ ಬೆಳೆಯಬೇಕು ಎಂದು ವಕೀಲ ಅನ್ಷಾದ್ ಪಾಳ್ಯ ಹೇಳಿದರು.

ಹಾಸನ ಜಿಲ್ಲಾ ಎಸ್‌ಎಸ್‌ಎಫ್ ಘಟಕದ ಆಶ್ರಯದಲ್ಲಿ ಹಲಸುಲಿಗೆ ಗ್ರಾಮದ ಹಜ್ರತ್ ಸೈಯದ್ ಜಲಾಲುದ್ದಿನ್ ದರ್ಗಾದ ಆವರಣದಲ್ಲಿ ಆಯೋಜಿಸಿದ್ದ 14ನೇ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಾಳಿನ ಸಮಾಜದ ನಿರ್ಮಾತೃಗಳಾಗಿದ್ದು, ರಾಷ್ಟ್ರ, ರಾಜ್ಯ, ಗ್ರಾಮ ಹಾಗೂ ನಗರಗಳ ಅಭಿವೃದ್ಧಿಗೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷ ಮೂಡಿಸುವ ಬದಲು ಪ್ರೀತಿ, ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಬೆಳೆಸುವ ಕೆಲಸವನ್ನು ಯುವಕರು ಮಾಡಬೇಕು ಎಂದರು.
ಧರ್ಮಪಂಡಿತ ಷರೀಫ್ ಮಿಸ್ಬಾಹಿ ಮಾತನಾಡಿ, ಮಾಧ್ಯಮಗಳಲ್ಲಿ ಧರ್ಮಗಳ ಕುರಿತು ಚರ್ಚಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಧರ್ಮದ ನೈಜ ಸಂದೇಶ ಹಾಗೂ ಮೂಲ ಗ್ರಂಥಗಳ ಅರಿವು ಹೊಂದಿರುವವರ ಅಭಿಪ್ರಾಯಗಳಿಗೆ ಆದ್ಯತೆ ನೀಡಬೇಕು ಎಂದರು.

ಸ್ಪರ್ಧೆಯಲ್ಲಿ ಸಕಲೇಶಪುರ ಘಟಕವು ಮೊದಲ ಸ್ಥಾನ ಗಳಿಸಿದರೆ, ದ್ವಿತೀಯ ಸ್ಥಾನವನ್ನು ಹಾಸನ ಘಟಕ ಗಳಿಸಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಘಟಕದ ವಿದ್ಯಾರ್ಥಿಗಳು ಭಾಷಣ, ಕವನ, ಹಾಡು, ಲೇಖನ ಹಾಗೂ ಪ್ರಬಂಧ ಸೇರಿದಂತೆ ವಿವಿಧ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಮರ್ಶಾದ್ ತಂಙಳ್, ಎಸ್ ಕೆ ಯು ಅಧ್ಯಕ್ಷರಾದ ಸೈದಲವಿ ಸಖಾಫಿ, ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ರಫೀಕ್ ಮದನಿ, ಆನೆಮಹಲ್ ಹಸೈನಾರ್, ಹಲಸುಲಿಗೆ ಮಸೀದಿಯ ಅಧ್ಯಕ್ಷ ಶೇಕ್ ಅಹಮದ್,
ಕುಡಗರಹಳ್ಳಿ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಕುಡಗರಹಳ್ಳಿ, ಎಸ್‌ಎಸ್‌ಎಫ್‌ನ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.