ಸಂಸದ ಶ್ರೇಯಸ್ ಎಂ. ಪಟೇಲ್ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಲಭ್ಯತೆ ಮತ್ತು ವಿತರಣೆ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಕೃಷಿ ಜಂಟಿ ನಿರ್ದೇಶಕ ರಮೇಶ್ ಇತರರಿದ್ದರು.
- ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಆಗದಿರಲಿ
- ಸಂಸದ ಶ್ರೇಯಸ್ ಎಂ. ಪಟೇಲ್ ಸೂಚನೆ
- ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ
ಹಾಸನ: ಮುಂಗಾರು ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಲಭ್ಯತೆ ಮತ್ತು ವಿತರಣೆ ಕುರಿತು ಗುರುವಾರ ಸಂಸದ ಶ್ರೇಯಸ್ ಎಂ. ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಜಿಲ್ಲೆಯ ರೈತರಿಗೆ ಯಾವುದೇ ರೀತಿಯ ಬೀಜ ಹಾಗೂ ರಸಗೊಬ್ಬರ ಕೊರತೆ ಉಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು. ಕಳೆದ ಸಾಲಿನಲ್ಲಿ ಕಂಡುಬಂದ ಬೆಳೆ ರೋಗಗಳ ಹಿನ್ನೆಲೆಯಲ್ಲಿ ಗುಣಮಟ್ಟದ ಮತ್ತು ರೋಗಮುಕ್ತ ಬೀಜಗಳನ್ನು ಮಾತ್ರ ರೈತರಿಗೆ ವಿತರಿಸುವಂತೆ ಒತ್ತಾಯಿಸಿದರು.
ರಸಗೊಬ್ಬರಗಳ ದಾಸ್ತಾನು, ಬೇಡಿಕೆ ಹಾಗೂ ವಿತರಣೆಯ ಕುರಿತು ಅಧಿಕಾರಿಗಳು ವಿವರ ನೀಡಿದ್ದು, ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದ ದಾಸ್ತಾನು ಲಭ್ಯವಿರುವುದಾಗಿ ತಿಳಿಸಿದರು. ರೈತರಿಗೆ ನಿಗದಿತ ದರದಲ್ಲೇ ಕೃಷಿ ಪರಿಕರಗಳನ್ನು ಒದಗಿಸುವುದು, ಅಕ್ರಮ ಮಾರಾಟವನ್ನು ತಡೆಯುವುದು ಮತ್ತು ಎಫ್‌ಐಡಿ ಆಧಾರಿತ ಪಾರದರ್ಶಕ ವಿತರಣಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಂಸದರು ಸೂಚಿಸಿದರು.
ಇದೇ ವೇಳೆ, ಮುಸುಕಿನ ಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ರೋಗಮುಕ್ತ ಬೀಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಪರೀಕ್ಷೆಗಳನ್ನು ನಡೆಸಿ ಮಾತ್ರ ವಿತರಣೆ ಮಾಡಲು ಹಾಗೂ ರೈತರಿಗೆ ಬೆಳೆ ನಿರ್ವಹಣೆ, ರೋಗ ನಿಯಂತ್ರಣ ಮತ್ತು ಪರ್ಯಾಯ ಬೆಳೆಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ರೈತರ ಹಿತದೃಷ್ಟಿಯಿಂದ ಮುಂಗಾರು ಹಂಗಾಮಿನಲ್ಲಿ ಯಾವುದೇ ಕೊರತೆ ಉಂಟಾಗದಂತೆ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವಂತೆ ಸಂಸದ ಶ್ರೇಯಸ್ ಎಂ. ಪಟೇಲ್ ಸೂಚಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು, ಉತ್ಪಾದಕರು, ಸರಬರಾಜುದಾರರು ಹಾಗೂ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.