ಉಂಡಿಗನಾಳು ಗ್ರಾಮ ಪಂಚಾಯಿತಿಯ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಸಿಇಒ ಶುಭಂ ಶುಕ್ಲ ಭೇಟಿ ನೀಡಿ ಮಾಹಿತಿ ಪಡೆದರು. ಕಾರ್ಯಪಾಲಕ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರ, ಇತರ ಅಧಿಕಾರಿಗಳು ಇದ್ದರು. 
ಹಾಸನ

ಆಸ್ಪತ್ರೆಗಳಲ್ಲಿ ಔಷಧಗಳು ಕೊರತೆಯಾಗದಿರಲಿ

ಪ್ರಮುಖ ಮುಖ್ಯಾಂಶಗಳು

  • ಆಸ್ಪತ್ರೆಗಳಲ್ಲಿ ಔಷಧಗಳು ಕೊರತೆಯಾಗದಿರಲಿ
  • ಜಿಪಂ ಸಿಇಒ ಶುಭಂ ಶುಕ್ಲಾ ಸೂಚನೆ
  • ವಿವಿಧ ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲನೆ
ಹಾಸನ: ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಚುಚ್ಚು ಮದ್ದುಗಳು ಹಾಗೂ ಔಷಧಗಳು ಲಭ್ಯವಿರುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲಾ ತಿಳಿಸಿದ್ದಾರೆ.
ಅರಸೀಕೆರೆ ತಾಲೂಕಿನ ಉಂಡಿಗನಾಳು, ಬಂದೂರು ಹಾಗೂ ಜಾವಗಲ್ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ವಿವಿಧ ಯೋಜನೆಗಳಡಿ ಅನುಷ್ಠಾನ ಮಾಡಲಾಗಿರುವ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು.
ಉಂಡಿಗನಾಳು ಗ್ರಾಮ ಪಂಚಾಯಿತಿಯ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಆಸ್ಪತ್ರೆಗೆ ಭೇಟಿ ನೀಡಿದ್ದ ರೋಗಿಗಳು ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.
ಅಂಗನವಾಡಿಯಲ್ಲಿ ಅಳವಡಿಸಿರುವ ನಲ್ಲಿಯಲ್ಲಿ ನೀರು ಬರದಿರುವುದನ್ನು ಗಮನಿಸಿ ಕೂಡಲೇ ಸರಿಪಡಿಸಿ ವರದಿ ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಜಲ ಜೀವನ ಮಿಷನ್ ಯೋಜನೆಯಡಿ ಪೈಪ್‌ಲೈನ್ ಅನ್ನು ಚರಂಡಿಯಲ್ಲಿಯೇ ಅಳವಡಿಸಿರುವುದನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಸರಿಪಡಿಸುವಂತೆ ಸೂಚಿಸಿದರು.
5054 ಯೋಜನೆಯಡಿ ಅನುಷ್ಠಾನ ಮಾಡಲಾಗಿರುವ ಸಿಸಿ ರಸ್ತೆಗಳನ್ನು ಪರಿಶೀಲಿಸಿ, ಖುದ್ದಾಗಿ ಅಳತೆ ಪ್ರಮಾಣಗಳನ್ನು ಪರಿಶೀಲಿಸಿ ನ್ಯೂನತೆಗಳನ್ನು ಸರಿಪಡಿಸುವಂತೆ ಸೂಚಿಸಿದರು. ಬಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಲಿಂಗ್ಲಾಪುರ ಗ್ರಾಮಕ್ಕೆ ಹೋಗುವ ಡಾಂಬರು ರಸ್ತೆಯನ್ನು ಪರಿಶೀಲಿಸಿದರು.
ಜಾವಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಪಿ.ಎಸ್ ಶಾಲೆಗೆ ಭೇಟಿ ನೀಡಿ ಶಾಲೆಯ ಸ್ವಚ್ಛತೆ ಕಾಪಾಡುವಂತೆ ಹಾಗೂ ನೀರು ಪೋಲಾಗದಂತೆ ನಲ್ಲಿಗಳನ್ನು ಅಳವಡಿಸುವಂತೆ ಶಾಲಾ ಶಿಕ್ಷಕರಿಗೆ ಸೂಚಿಸಿ, ಶಾಲಾ ಮಕ್ಕಳೊಂದಿಗೆ ಸಮಾಲೋಚಿಸಿ ಕುಂದು ಕೊರತೆಗಳನ್ನು ವಿಚಾರಿಸಿದರು.
ಕ್ಷೇತ್ರ ಭೇಟಿ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.