ಹಿರೀಸಾವೆಯ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ಸಾಗಿತು. ಎಚ್.ಈ.ಬೋರಣ್ಣ, ವೆಂಕಟೇಶ್, ಮಂಜು, ಸಿದ್ದಲಿಂಗ ಸ್ವಾಮಿ, ಸಿದ್ದಲಿಂಗಪ್ಪ, ದಿವ್ಯಾರಾಣಿ ಇತರರು ಇದ್ದರು. 
ಹಾಸನ

ಹಿಂದೂ ಧರ್ಮ ಉಳಿಸಲು ಯುವಕರು ಒಗ್ಗೂಡಲಿ

ಪ್ರಮುಖ ಮುಖ್ಯಾಂಶಗಳು

  • ನುಗ್ಗೇಹಳ್ಳಿ ಪುರವರ್ಗ ಹಿರೇಮಠ
  • ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ
  • ಹಿಂದೂ ಸಮಾಜೋತ್ಸವ ಸಮಿತಿ
ಹಿರೀಸಾವೆ: ಸನಾತನ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಲು ಯುವ ಸಮುದಾಯ ಒಗ್ಗೂಡಿ ಮುನ್ನಡೆಯಬೇಕು ಎಂದು ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಶೋಭಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ದೈನಂದಿನ ಬದುಕು ಹಾಗೂ ಸಂಸ್ಕೃತಿಯೇ ಹಿಂದೂ ಧರ್ಮವಾಗಿದ್ದು, ಭಾರತೀಯ ಸಂಸ್ಕೃತಿಯು ಹಿಂದೂ ಧರ್ಮದ ತಳಹದಿಯ ಮೇಲೆ ನಿಂತಿದೆ. ಧರ್ಮವನ್ನು ಪ್ರೀತಿಸಿದರೆ ದೇವರನ್ನು ಪೂಜಿಸಿದಷ್ಟೇ ಪುಣ್ಯ ಸಿಗಲಿದೆ ಎಂದು ತಿಳಿಸಿದರು.
ಸಾಮಾಜಿಕ ಹೋರಾಟಗಾರ ಎಚ್.ಎನ್.ಚಂದ್ರಶೇಖರ್ ಮಾತನಾಡಿ, ಅನ್ಯ ದೇಶಿಗರ ಅತಿಕ್ರಮಣ ಪ್ರವೇಶ ಹಾಗೂ ಅನಧಿಕೃತ ವಲಸಿಗರ ಆಗಮನದಿಂದ ದೇಶದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದ ದೇಶದಲ್ಲಿ ಅಶಾಂತಿ ಹೆಚ್ಚಾಗಿದ್ದು, ಹಿಂದೂ ಸಮಾಜ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಹಂಪಾಪುರದ ಸುಭಾಸು ಗೋಶಾಲೆಯ ಡಾ.ಸ್ವರೂಪಾರಾಣಿ ಮಾತನಾಡಿ, ಮನೆಯಲ್ಲಿ ಪಾಲಕರು ಮಕ್ಕಳಿಗೆ ಧರ್ಮ, ಸಂಸ್ಕೃತಿ ಹಾಗೂ ಸಂಸ್ಕಾರ ಸೇರಿದಂತೆ ಮೂಲ ಪದ್ಧತಿ ಬಗ್ಗೆ ತಿಳಿಸಬೇಕು. ಮಕ್ಕಳನ್ನು ವೀರರಂತೆ ಬೆಳೆಸಬೇಕು. ಇದರಿಂದ ಮಾತ್ರ ಮುಂದಿನ ಪೀಳಿಗೆಯಲ್ಲಿಯೂ ಧರ್ಮ ಬೆಳೆಯಲು ಸಾಧ್ಯ ಎಂದರು.
ಶ್ರೀ ಚೌಡೇಶ್ವರಿ ಉಯ್ಯಲೆ ಕಂಬದ ಬಳಿಯಿಂದ ಪ್ರಾರಂಭಗೊಂಡ ಶೋಭಾ ಯಾತ್ರೆ ಮುಖ್ಯ ರಸ್ತೆ ಮೂಲಕ ಶ್ರೀಕಂಠಯ್ಯ ವೃತ್ತದ ಮಾರ್ಗವಾಗಿ ವೇದಿಕೆ ಬಳಿಗೆ ಆಗಮಿಸಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಈ.ಬೋರಣ್ಣ, ಹಿಂದೂಪರ ಹೋರಾಟಗಾರರಾದ ನಾಗೇಶ್ ಹಿರೆಬಿಳ್ತಿ, ಕೃಷ್ಣಮೂರ್ತಿ, ನಂಬಿಹಳ್ಳಿ ಗಿರೀಶ್, ಸಿದ್ದಲಿಂಗ ಸ್ವಾಮಿ, ಎಚ್.ಆರ್.ಸಿದ್ದಲಿಂಗಪ್ಪ, ದಿವ್ಯಾರಾಣಿ, ಆತ್ರೇಯ ಶ್ರೀನಿವಾಸ್, ಅವಿನಾಶ್, ಸಂತೋಷ್, ನರೇಂದ್ರ, ಮಾದರಗೆರೆ ವೀಣಾ ಲೋಕೇಶ್ ಇತರರು ಇದ್ದರು.