ಗಮನಸೆಳೆದ ಕುವೆಂಪು ಗೀತೆಗಳ ನೃತ್ಯ ರೂಪಕ.
- ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಯುವಕರು ಅರಿಯಲಿ
- ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಆಶಯ
ಹಾಸನ: ಸರ್ವಗುಣ ಯೋಗಿ ಎನಿಸಿಕೊಂಡಿರುವ ರಾಷ್ಟ್ರಕವಿ ಕುವೆಂಪು ಅವರ ಬರಹವನ್ನು ಯುವಕರು ಓದುವ ಮೂಲಕ ಭಾರತೀಯ ಆಧ್ಯಾತಿಕ, ಸಾಂಸ್ಕೃತಿಕ ಪರಂಪರೆಯನ್ನು ಅರಿಯಬೇಕೆಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಾಸನ ಜಿಲ್ಲಾ ಘಟಕ, ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ, ರೋಟರಿ ಕ್ಲಬ್ ಆಫ್ ಹಾಸನ್ ಟೈಗರ್, ಇತರೆ ಸಂಘ ಸಂಸ್ಥೆ, ಬೆಂಗಳೂರಿನ ಮನೋಜ್ಞ ನೃತ್ಯಕಲಾ ಅಕಾಡೆಮಿ ವತಿಯಿಂದ ನಗರದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾಡಿನ ಕೊಳಲು ಕುವೆಂಪು ಗೀತೆಗಳ ನೃತ್ಯ ರೂಪಕ ಸಮಾರಂಭದಲ್ಲಿ ಮಾತನಾಡಿದರು.
ಕುವೆಂಪು ಅವರನ್ನು ಎಲ್ಲರಿಗೂ ಪರಿಚಯಿಸಬೇಕಿದೆ. ಸಾಂಸ್ಕೃತಿಕ, ಆಧ್ಯಾತಿಕವಾಗಿ ಭಾರತ ಸಾಕಷ್ಟು ಖ್ಯಾತಿ ಹೊಂದಿದೆ. ಪುರಾತನ ಪರಂಪರೆ ಬಗ್ಗೆ ವಿಶ್ವವೇ ಅಚ್ಚರಿ ವ್ಯಕ್ತಪಡಿಸುತ್ತದೆ. ಅಂತಹ ಶಕ್ತಿಯನ್ನು ಸಾಹಿತ್ಯದ ಮೂಲಕ ಪರಿಚಯಿಸಿಕೊಟ್ಟವರು ರಾಷ್ಟ್ರಕವಿ ಕುವೆಂಪು ಎಂದರು.
ಮನುಷ್ಯ ಚಿಂತನೆಗಲ್ಲಿ ಭಾವ ಹಾಗೂ ಅಭಾವ ಮುಖ್ಯವಾಗುತ್ತದೆ. ಯಾವುದನ್ನೇ ಆಗಲಿ ಭಾವದಿಂದ ನೋಡಬೇಕೆ ಹೊರತು ಅಭಾವದಿಂದ ಅಲ್ಲ. ಋಷಿಗಳಿಗೆ ನೋಡಿದ್ದೆಲ್ಲ ಭಾವವಾಗಿ ಕಾಣುತ್ತದೆ. ಆದ್ದರಿಂದಲೇ ಅವರು ಅಸಾಧ್ಯವಾದುದನ್ನು ಸಾಧಿಸಿದ್ದಾರೆ ಎಂದರು.
ಭಾವನೆಗಳು ಬದಲಾದರೆ ಮನುಷ್ಯರಾಗಲು ಸಾಧ್ಯವಿಲ್ಲ. ಮನುಷ್ಯ ಭಾವನೆಗಳನ್ನು ಹೊಂದಬೇಕು. ವ್ಯಕ್ತಿಯ ಚಿಂತನಾ ಲಹರಿ ಆಳಕ್ಕಿಳಿಯಬೇಕೆಂದರೆ ಕುವೆಂಪು ಸಾಹಿತ್ಯ ಓದಬೇಕು. ಮರಣ ಇಲ್ಲದ ವಸ್ತು ಎಂದರೆ ಪುಸ್ತಕ ಮಾತ್ರ. ಭಗವಂತ ಕೊಟ್ಟ ಸುಂದರ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ಸತ್ಕಾರ್ಯಗಳಲ್ಲಿ ನಮನ್ನು ನಾವು ತೊಡಗಿಸಿಕೊಳ್ಳಬೇಕೆಂದರು.
ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಡಾ.ಜಯಪ್ರಕಾಶ್‌ಗೌಡ ಮಾತನಾಡಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ನಾಡಿನ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದರು.
ಕುವೆಂಪು ಅವರನ್ನು ನೃತ್ಯದ ಮೂಲಕ ಅರಿಯಬೇಕೆಂದು ಹಾಸನದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಪ್ರೌಢಶಾಲಾ ಹಂತದಿಂದಲೇ ನೃತ್ಯದ ಮೂಲಕ ಗಮನ ಸೆಳೆದ ಡಾ. ಮಾನಸಾ ಅವರು ಬಿಇ ಪದವಿ ಪಡೆದು ಪಿಎಚ್.ಡಿ ಕೂಡ ಮಾಡಿದ್ದಾರೆ. ರಾಜ್ಯ ಮಾತ್ರವಲ್ಲದೆ ಅನೇಕ ಕಡೆ ನೃತ್ಯ ಕಾರ್ಯಕ್ರಮಗಳ ಮೂಲಕ ಕುವೆಂಪು ಅವರನ್ನು ರಾಷ್ಟ್ರಕ್ಕೆ ಪರಿಚಯಿಸುತ್ತಿದ್ದಾರೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜೆ.ಆರ್.ಕೆಂಚೇಗೌಡ, ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಶಿವರಾಮೇಗೌಡ ಮಾತನಾಡಿದರು. ವಿಜಯ ಸ್ಕೂಲ್‌ನ ತಾರಾ ಎಸ್.ಸ್ವಾಮಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಾಗೂರು ಕೃಷ್ಣೇಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ನಗರಸಭೆ ಮಾಜಿ ಅಧ್ಯಕ್ಷ ಡಾ. ಎಚ್.ಎಸ್.ಅನಿಲ್ ಕುಮಾರ್, ರೋಟರಿ ಕ್ಲಬ್ ಆಫ್ ಹಾಸನ್ ಟೈಗರ್ ಅಧ್ಯಕ್ಷ ನಿಶ್ಚಯ್ ಧನಪಾಲ್ ಜೈನ್, ಎಚ್.ಬಿ.ಮದನ್ ಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ರಘು, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೂಡು ಇತರರಿದ್ದರು. ಶಂಭುನಾಥ ಸ್ವಾಮೀಜಿ ಮಾತನಾಡಿದರು. ಪ್ರೊ. ಡಾ. ಜಯಪ್ರಕಾಶ್ ಗೌಡ, ಜೆ.ಆರ್.ಕೆಂಚೇಗೌಡ, ಶಿವರಾಮೇಗೌಡ, ತಾರಾ ಎಸ್. ಸ್ವಾಮಿ, ಬಾಗೂರು ಕೃಷ್ಣೇಗೌಡ, ಡಾ.ಎಚ್.ಎಲ್.ಮಲ್ಲೇಶಗೌಡ, ಡಾ. ಎಚ್.ಎಸ್.ಅನಿಲ್ ಕುಮಾರ್, ನಿಶ್ಚಯ್ ಧನಪಾಲ್ ಜೈನ್, ಎಚ್.ಬಿ.ಮದನ್ ಗೌಡ ಇತರರಿದ್ದರು.