ಅರಕಲಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಯುವಕರು ರಕ್ತದಾನ ಮಾಡಿದರು.
ಅರಕಲಗೂಡು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕಾಲೇಜು ಅಭಿವೃದ್ಧಿ ಸಮಿತಿ ಬಾಲಾಜಿ ಮಾತನಾಡಿ, ಯುವಕರು ರಕ್ತದಾನ ಮಾಡುವುದರ ಮೂಲಕ ತಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ರಕ್ತದಾನ ಮಾಡುವುದರಿಂದ ದಾನಿಗಳಿಗೆ ಆರೋಗ್ಯದಲ್ಲಿ ಸುಧಾರಣೆಯಾಗುವುದು ಹಾಗೂ ಮೂರರಿಂದ ನಾಲ್ಕು ಜನರಿಗೆ ಜೀವದಾನ ಮಾಡಿರುವ ಶ್ರೇಷ್ಠತೆ ದಾನಿಗಳಿಗೆ ಲಭಿಸುತ್ತದೆ ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆ ಆಪ್ತ ಸಮಾಲೋಚಕ ಪರಶುರಾಮ ಶಿರೂರ ಮಾತನಾಡಿ, ಜಿಲ್ಲೆಯಲ್ಲಿ ಒಂದು ತಿಂಗಳಿಗೆ ಸುಮಾರು 1500-1800 ಯೂನಿಟ್ಸ್ ರಕ್ತದ ಅವಶ್ಯಕತೆ ಇದೆ. ಆದರೆ ಇಡೀ ಜಿಲ್ಲೆಯಾದ್ಯಂತ ಸಾಕಷ್ಟು ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡರೂ 400-500 ಯುನಿಟ್ಸ್ ರಕ್ತದ ಕೊರತೆ ಕಂಡು ಬರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ರಕ್ತದ ಬೇಡಿಕೆ ಹೆಚ್ಚಾಗಿದೆ. ತಾಲೂಕಿನಲ್ಲಿಯೂ ಸಹ ಪ್ರತಿ ತಿಂಗಳಿಗೆ 30 ಯೂನಿಟ್ ರಕ್ತದ ಅವಶ್ಯಕತೆ ಇದೆ. ಸಾಕಷ್ಟು ರೀತಿಯಲ್ಲಿ ಶಸ್ತ್ರ ಚಿಕಿತ್ಸೆಗಳು ಹಾಗೂ ಗರ್ಭಿಣಿಯರಲ್ಲಿ ರಕ್ತದ ಕೊರತೆ ಕಂಡು ಬರುತ್ತಿದೆ. ಕಣ್ಣಿನ ಶಸ್ತ್ರ ಚಿಕಿತ್ಸೆ ಪ್ರಮಾಣದಲ್ಲಿ ಕುಟುಂಬ ಕಲ್ಯಾಣ ಸಂತಾನ ಹರಣ ಶಸ್ತ್ರ ಚಿಕಿತ್ಸಾ ತಾಲೂಕಿನಲ್ಲಿ ಡಯಾಲಿಸಿಸ್ ಕೇಂದ್ರವೂ ಕಾರ್ಯನಿರ್ವಹಿಸುತ್ತಿದ್ದು ಅಲ್ಲಿಯೂ ರಕ್ತದ ಬಳಕೆ ಆಗುತ್ತಿರುವುದರಿಂದ ಹೆಚ್ಚು ರಕ್ತದ ಅವಶ್ಯಕತೆ ಇದೆ. ಪ್ರತಿಯೊಬ್ಬರೂ ಯಾವುದೇ ಭಯ ಮತ್ತು ಆತಂಕಕ್ಕೆ ಒಳಗಾಗದೆ ಮುಕ್ತವಾಗಿ ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಾಂಶುಪಾಲ ಎ.ಎಲ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಿಡಿಸಿ ಸದಸ್ಯರಾದ ರವಿಕುಮಾರ್, ಸಾಕಿಬ್ ಉರ್ ರೆಹಮಾನ್, ನಿರ್ಮಲಾ, ಉದೇಶ್, ಸಿದ್ದರಾಜು, ರೆಡ್ ಕ್ರಾಸ್ ಸಂಸ್ಥೆಯ ಕುಮಾರ್, ಭೀಮರಾಜ್, ಶಿವಕುಮಾರ್, ಪ್ರವೀಣ್ ಕುಮಾರ್, ಮೂಡ್ಲಿಗಿಗೌಡ, ಉಪನ್ಯಾಸಕ ಕುಮಾರ್ ಇತರರಿದ್ದರು. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.