ಹಾಸನ ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಹಾಗೂ ಕಾಲೇಜಿನ ಐಕ್ಯೂಎಸಿ ಘಟಕದ ವತಿಯಿಂದ ರೋಟ್ರಾೃಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಕೆ.ಪಾಲಾಕ್ಷ, ಬಿ.ಕೆ. ಟೈಮ್ಸ್ ಗಂಗಾಧರ್, ಕೆ.ಜಿ. ಕವಿತಾ, ಎ.ಜೆ. ಮಂಜುನಾಥ್, ಎಸ್.ಯೋಗೇಶ್ ಇತರರಿದ್ದರು.
- ಸಮಾಜ ಸೇವೆಗೆ ಯುವಕರು ಸಜ್ಜುಗೊಳ್ಳಲಿ
- ರೋಟರಿ ಜಿಲ್ಲಾ ಪ್ರಾಂತಪಾಲ ಕೆ.ಪಾಲಾಕ್ಷ ಕರೆ
- ರೋಟರ‌್ಯಾಕ್ಟ್ ಕ್ಲಬ್‌ನ ಪದಾಧಿಕಾರಿಗಳ ಪದಗ್ರಹಣ
ಹಾಸನ: ಸಮಾಜ ಸೇವೆಗೆ ಯುವ ಪೀಳಿಗೆಯನ್ನು ತೊಡಗಿಸಿಕೊಳ್ಳುವಂತೆ ಮಾಡಲು ರೋಟರಿ ಸಂಸ್ಥೆ ವತಿಯಿಂದ ಕಾಲೇಜು ಹಂತದಲ್ಲಿ ರೋಟರ‌್ಯಾಕ್ಟ್ ಕ್ಲಬ್‌ಗಳನ್ನು ಆರಂಭಿಸಲಾಗುತ್ತಿದ್ದು, ಆ ಮೂಲಕ ಯುವ ನಾಯಕರನ್ನು ಸಮಾಜಕ್ಕೆ ನೀಡುವ ಕಾರ್ಯವನ್ನು ಸಂಸ್ಥೆ ವತಿಯಿಂದ ಮಾಡಲಾಗುತ್ತಿದೆ ಎಂದು ರೋಟರಿ 3182 ಜಿಲ್ಲಾ ಪ್ರಾಂತಪಾಲ ಕೆ.ಪಾಲಾಕ್ಷ ಹೇಳಿದರು.
ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಹಾಗೂ ಕಾಲೇಜಿನ ಐಕ್ಯೂಎಸಿ ಘಟಕದ ವತಿಯಿಂದ ನಡೆದ ರೋಟರ‌್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ, ಖಜಾಂಚಿ ಮತ್ತು ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ಶಾಲಾ-ಕಾಲೇಜು ಹಂತದಲ್ಲಿ ಮಕ್ಕಳನ್ನು ಸಾಮಾಜಿಕ ಸೇವೆಯಲ್ಲಿ ತೊಡಗುವಂತೆ ಮಾಡಲು ರೋಟರಿ ರೋಟರ‌್ಯಾಕ್ಟ್ ಕ್ಲಬ್‌ಗಳನ್ನು ಆರಂಭಿಸಲಾಗಿದ್ದು, ಪದವಿ ಹಂತದಲ್ಲಿ ಯುವಕರು ತಮ್ಮ ಪಠ್ಯದೊಂದಿಗೆ ರೋಟರಿಯಲ್ಲಿ ಕಾರ್ಯನಿರ್ವಹಿಸಿದರೆ ಜೀವನದಲ್ಲಿ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಲಿದೆ. ಕಾಲೇಜಿನ ವಿದ್ಯಾಭ್ಯಾಸದ ಅವಧಿಯಲ್ಲಿ ಸಾಮಾಜಿಕ ಸೇವೆ, ಹೊಣೆಗಾರಿಕೆ, ಮಾತುಗಾರಿಕೆ ಸೇರಿದಂತೆ ಜವಾಬ್ದಾರಿಯುತ ಹುದ್ದೆಗಳ ನಿರ್ವಹಣೆಯ ಬಗ್ಗೆ ತಿಳಿಯಲು ಸಹಕಾರಿಯಾಗಲಿದೆ ಎಂದರು.
ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಅಧ್ಯಕ್ಷ ಬಿ.ಕೆ. ಟೈಮ್ಸ್ ಗಂಗಾಧರ್ ಮಾತನಾಡಿ, ರೋಟರಿ ನಡೆಸಿಕೊಂಡು ಬಂದಿರುವ ಸಾಮಾಜಿಕ ಕೆಲಸಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದರ ಜತೆಗೆ ಸಂಸ್ಥೆ ಸಮಾಜದಲ್ಲಿ ಹೇಗೆ ಶೋಷಿತರ ಪರವಾಗಿ ಕೆಲಸ ಮಾಡುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ. ಕವಿತಾ ಮಾತನಾಡಿ, ಇಂದು ಯುವ ಪೀಳಿಗೆ ಸಾಮಾಜಿಕ ಜವಾಬ್ದಾರಿಯನ್ನು ಮರೆಯುತ್ತಿದೆ. ಹಾಗಾಗಿ ಅವರಿಗೆ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ತಿಳಿಸಿಕೊಡಬೇಕಾದ ಅಗತ್ಯತೆ ಇದೆ. ರೋಟರಿ ಸಂಸ್ಥೆ ಈ ವಿಚಾರವಾಗಿ ನಮ್ಮ ಕಾಲೇಜಿನಲ್ಲಿ ತಮ್ಮ ಅಂಗ ಸಂಸ್ಥೆಯನ್ನು ಆರಂಭಿಸುವ ಮೂಲಕ ಮಕ್ಕಳಲ್ಲಿ ನಾಯಕತ್ವದ ಗುಣ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗುವಂತೆ ಮಾಡಲು ಮುಂದೆ ಬಂದಿರುವುದು ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಆಫ್ ಹಾಸನ ರಾಯಲ್‌ನ ಅಂಗ ಸಂಸ್ಥೆಯಾದ ಮಹಿಳಾ ರೋಟರ‌್ಯಾಕ್ಟ್ ಕ್ಲಬ್ ಆಫ್ ರಾಯಲ್‌ನ ನೂತನ ಅಧ್ಯಕ್ಷರಾಗಿ ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಗಗನಾ, ಕಾರ್ಯದರ್ಶಿ ನಿವೇದಿತಾ ಹಾಗೂ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಮಿಸ್ಬಾ ಖಜಾಂಚಿಯಾಗಿ ಆಯ್ಕೆಯಾದರು.
ರೋಟರಿ ಜೋನ್ 9ರ ಸಹಾಯಕ ಪ್ರಾಂತಪಾಲ ಎ.ಜೆ. ಮಂಜುನಾಥ್, ಐಕ್ಯೂಎಸಿ ಸಂಚಾಲಕ ಎಸ್.ಯೋಗೇಶ್, ರೋಟರಿ ಕ್ಲಬ್ ಆಫ್ ಹಾಸನ ರಾಯಲ್‌ನ ಕಾರ್ಯದರ್ಶಿ ಪಿ.ರವಿ ಕುಮಾರ್, ಖಜಾಂಚಿ ಎಚ್.ಕೆ.ದಿಲೀಪ್ ಕುಮಾರ್, ಮಾಜಿ ಅಧ್ಯಕ್ಷ ಸಚ್ಚಿನ್ ಇತರರಿದ್ದರು.