ಯಗಚಿ ಜಲಾಶಯದ ಸುತ್ತಮುತ್ತಲಿನ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಹೆಬ್ಬಾಳು ಏತ ನೀರಾವರಿ ಯೋಜನೆಯನ್ನು ಶೀಘ್ರವೇ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಗೂ ಮುಖಂಡರು ಸೋಮವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ಸಂಚಾರ ತಡೆ ಮೂಲಕ ಪ್ರತಿಭಟಿಸಿದರು. ಮುಖಂಡ ಮಧುನಾಯಕ್,ಉಮೇಶ್, ಪ್ರತಾಪ್ ಇತರರಿದ್ದರು.
- ವಿವಿಧ ಗ್ರಾಮಗಳ ಗ್ರಾಮಸ್ಥರಿಂದ ರಸ್ತೆ ಸಂಚಾರ ತಡೆ ಮೂಲಕ ಧರಣೆ
ಬೇಲೂರು: ಯಗಚಿ ಜಲಾಶಯದ ಸುತ್ತಮುತ್ತಲಿನ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಹಾಗೂ ಬಹು ದಿನಗಳ ಬೇಡಿಕೆಯಾದ ಹೆಬ್ಬಾಳು ಏತ ನೀರಾವರಿ ಯೋಜನೆಯನ್ನು ಶೀಘ್ರವೇ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಗೂ ಮುಖಂಡರು ಸೋಮವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ಸಂಚಾರ ತಡೆ ಮೂಲಕ ಪ್ರತಿಭಟಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಕಾರರು ಬಸವೇಶ್ವರ ವೃತ್ತದಲ್ಲಿ ಕೆಲಕಾಲ ರಸ್ತೆ ಮೇಲೆ ಕುಳಿತು ಧರಣಿ ನಡೆಸಿದರು. ನಂತರ ಮುಖ್ಯರಸ್ತೆ, ಯಗಚಿ ಸೇತುವೆ ಹಾಗೂ ನೆಹರು ನಗರದ ಮೂಲಕ ತಾಲೂಕು ಕಚೇರಿಗೆ ತೆರಳಿ ಶಿರಸ್ತೇದಾರ್ ತನ್ವೀರ್ ಅಹಮದ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಶಿವರಾಂ, ಹೆಬ್ಬಾಳು ಏತ ನೀರಾವರಿ ಯೋಜನೆ ಈ ಭಾಗದ ನಾಗರಿಕರ ಬಹು ದಿನಗಳ ಬೇಡಿಕೆಯಾಗಿದೆ. ಈಗಾಗಲೇ ಈ ಯೋಜನೆಗೆ ಡಿಪಿಆರ್ ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮೊದಲ ಆದ್ಯತೆ ನೀಡಿ ಈ ಯೋಜನೆಯನ್ನು ಅನುಷ್ಠಾನಗೊಳಿಸ ಬೇಕು. ಇದರಿಂದ ಯಗಚಿ ಜಲಾಶಯದ ಸುತ್ತಮುತ್ತಲಿನ 61 ಕೆರೆಗಳನ್ನು ತುಂಬಿಸುವ ಮೂಲಕ ಈ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಆದರೆ ಕೆಲವರ ಕೇವಲ ಭಾಷಣಗಳಿಂದ ಯಾವುದೇ ಯೋಜನೆ ಅನುಷ್ಠಾನಗೊಳ್ಳುವುದಿಲ್ಲ. ಅದಕ್ಕೆ ಸತತ ಪ್ರಯತ್ನ ಮತ್ತು ಬದ್ಧತೆ ಇರಬೇಕಿ. ಅಲ್ಲದೆ ಮಳೆ ಇಲ್ಲದೆ ಬಿಸಿಲಿನ ತೀವ್ರತೆಯಿಂದ ಈ ಭಾಗದಲ್ಲಿ ರೈತರ ಬೆಳೆ ಸಂಪೂರ್ಣವಾಗಿ ನಷ್ಟವಾಗಿದ್ದು, ಬೇಲೂರು ತಾಲೂಕನ್ನು ಬರ ಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಾಗೂ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮತ್ತು ಸಚಿವರು, ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲಿದ್ದೇನೆ ಎಂದರು.
ಮುಖಂಡ ಹೆಬ್ಬಾಳು ಉಮಾಶಂಕರ್ ಮಾತನಾಡಿ, ತಾಲೂಕಿನ ಬಯಲು ಸೀಮೆಗೆ ಎತ್ತಿನಹೊಳೆ, ಯಗಚಿ ಏತ ನೀರಾವರಿ ಹಾಗೂ ರಣಘಟ್ಟ ಯೋಜನೆಗಳು ವರದಾನವಾಗಿವೆ. ಆದರೆ ಯಗಚಿ ಸುತ್ತಮುತ್ತಲಿನ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಇಂದಿಗೂ ಕುಡಿಯುವ ನೀರು ಹಾಗೂ ಕೃಷಿಗೆ ನೀರಿನ ಕೊರತೆ ಎದುರಿಸುತ್ತಿದ್ದಾರೆ ಹೆಬ್ಬಾಳು ಏತ ನೀರಾವರಿ ಯೋಜನೆ ಅನುಷ್ಠಾನಗೊಂಡರೆ ಹೆಬ್ಬಾಳು, ನಾರಾಯಣಪುರ, ಹನಿಕೆ, ಬಂಟೇನಹಳ್ಳಿ, ಇಬ್ಬೀಡು, ಯಲಹಂಕ, ರಾಜನ ಶಿರಿಯೂರು ಹಾಗೂ ಹಳೇಬೀಡು ವ್ಯಾಪ್ತಿಯ 61 ಕೆರೆಗಳನ್ನು ಭರ್ತಿ ಮಾಡಲು ಸಾಧ್ಯವಾಗಲಿದೆ. ಬರಗಾಲದಿಂದ ಸಂಕಷ್ಟದಲ್ಲಿರುವ ರೈತರು ಈ ಯೋಜನೆಯ ಅನುಷ್ಠಾನಕ್ಕಾಗಿ ಎದುರು ನೋಡುತ್ತಿದ್ದಾರೆ. ಸರ್ಕಾರ ಕೂಡಲೇ ಯೋಜನೆಗೆ ಚಾಲನೆ ನೀಡಬೇಕು ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಮಧುನಾಯಕ್, ಉಮೇಶ್, ಪ್ರತಾಪ್, ಪುನೀತ್, ರಘು, ಮುತ್ತುಗನ್ನೆ ಮನು, ಕಿರಣ್, ಬಸವರಾಜ್, ಹೆಬ್ಬಾಳು ಉಮೇಶ್, ಪಾಪಣ್ಣ, ಕಿರೇಹಳ್ಳಿ ಪ್ರಸನ್ನ, ರಾಜನಶಿರಿಯೂರು ಮಹೇಶ್, ಬ್ಯಾಡರಹಳ್ಳಿ ಆನಂದ್, ನಿವೃತ್ತ ಉಪನ್ಯಾಸಕ ತಮ್ಮಣ್ಣಗೌಡ ಸೇರಿದಂತೆ ಹಲವು ಗ್ರಾಮಗಳ ಮುಖಂಡರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.