ಪಟ್ಟಣದ ಶ್ರೀ ಚೆನ್ನಕೇಶವಸ್ವಾಮಿ ದೇಗುಲಕ್ಕೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಭೇಟಿ ನೀಡಿ ದೇವಾಲಯದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಶ್ರೀಧರ ಕಂಕನವಾಡಿ, ಅಕ್ರಂ ಶರೀಫ್, ತೀರ್ಥಕುಮಾರಿ ವೆಂಕಟೇಶ್ ಇತರರಿದ್ದರು. 
ಹಾಸನ

ವಿಶ್ವ ವಿಖ್ಯಾತ ಶಿಲ್ಪಕಲೆ ವಿಗ್ರಹಗಳ ರಕ್ಷಣೆಯಾಗಲಿ

ಬೇಲೂರು : ವಿಶ್ವ ಪಾರಂಪಾರಿಕ ಪಟ್ಟಿಗೆ ಸೇರಿದ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿರುವ ವಿಶ್ವ ವಿಖ್ಯಾತ ಶಿಲ್ಪಕಲೆ ಹೊಂದಿರುವ ವಿಗ್ರಹಗಳನ್ನು ಯಾರೂ ಮುಟ್ಟದಂತೆ ಎಚ್ಚರಿಕೆ ವಹಿಸಿ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಹೇಳಿದರು.
ಪಟ್ಟಣದ ಶ್ರೀ ಚೆನ್ನಕೇಶವಸ್ವಾಮಿ ದೇಗುಲಕ್ಕೆ ಗುರುವಾರ ಭೇಟಿ ನೀಡಿ ದೇವರ ದರ್ಶನ ಪಡೆದು, ದೇಗುಲದ ಶಿಲ್ಪಕಲೆಗಳನ್ನು ವೀಕ್ಷಿಸಿದ ನಂತರ ಮಾತನಾಡಿದರು.
ಬೇಲೂರು ದೇಗುಲವು ವಿಶ್ವ ವಿಖ್ಯಾತ ದೇಗುಲವಾಗಿದೆ. ಇಲ್ಲಿನ ಶಿಲ್ಪಕಲೆಗಳನ್ನು ವೀಕ್ಷಿಸಲು ದೇಶ ವಿದೇಶದಿಂದ ಪ್ರವಾಸಿಗರು ಭಕ್ತರು ಬರುವುದರಿಂದ ಇಲ್ಲಿರುವ ಸುಂದರವಾದ ವಿಗ್ರಹಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಆದರೆ ಇಲ್ಲಿ ಸಂರಕ್ಷಣೆ ಮಾಡಬೇಕಾದ ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ ವಿಗ್ರಹಗಳ ಮೇಲೆ ಮಕ್ಕಳು, ದೊಡ್ಡವರು ಸೇರಿದಂತೆ ಸಾಕಷ್ಟು ಜನರು ಹತ್ತಿ ಮುಟ್ಟುವುದಲ್ಲದೆ ಬಡಿದು ಹಾಳು ಮಾಡುತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಈ ಬಗ್ಗೆ ನಿಗಾ ವಹಿಸಿ ಯಾರೂ ಸಹ ವಿಗ್ರಹಗಳನ್ನು ಮುಟ್ಟದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.
ವಿಗ್ರಹಗಳ ಮೇಲೆ ಕೂರುವವರು ಯಾರೇ ಆಗಲಿ ಅವರಿಗೆ ದಂಡ ವಿಧಿಸಿ ಕ್ರಮಕೈಗೊಳ್ಳಬೇಕು. ಅದಕ್ಕೂ ಬಗ್ಗದಿದ್ದಲ್ಲಿ ಪ್ರಕರಣ ದಾಖಲಿಸಿ ಎಂದು ತಾಕಿತು ಮಾಡಿದರು.
ದೇವಾಲಯದ ಆಗ್ನೇಯ ಮೂಲೆಯಲ್ಲಿರುವ ನವರಂಗ ಮಂಟಪದ ಶಿಥಿಲಾವಸ್ಥೆಯಲ್ಲಿದ್ದು ದುರಸ್ತಿಗೊಳಿಸಿ ಎಂದು ಸಾರ್ವಜನಿಕರಿಂದ ದೂರು ಬರುತ್ತಿದೆ. ಈಗಾಗಲೇ ಪರಿಶೀಲನೆ ನಡೆಸಿ ಪುರಾತತ್ವ ಇಲಾಖೆಗೆ ಪತ್ರ ಬರೆದು ಮಾಹಿತಿಯನ್ನು ನೀಡಲಾಗಿದೆ. ಆದರೂ ಅವರು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ನಾನು ಸಂಬಂಧಿಸಿದ ಮೇಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಪುರಸಭೆ ವ್ಯಾಪ್ತಿಯ ಹಾಗೂ ದೇವಸ್ಥಾನದ ಆಸ್ತಿಪಾಸ್ತಿಗಳು ಒತ್ತುವರಿಯಾಗಿರುವ ಬಗ್ಗೆ ಅಧಿಕಾರಿಗಳಿಂದ ವರದಿ ಬಂದಿದೆ. ಒತ್ತುವರಿ ಇಂದಿನಿಂದಲೂ ನಡೆದಿದೆ ಅದರ ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳೊಂದಿಗೆ ಹೋಗಿ ತೆರುವು ಗೊಳಿಸಬೇಕಾಗುವುದು. ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ಬಂದ ದಿನದಿಂದ ಯಾವುದೇ ಜಾಗವನ್ನು ಒತ್ತುವರಿಯಾಗಲು ಬಿಟ್ಟಿಲ್ಲ, ಬಿಡುವುದು ಇಲ್ಲ ಎಂದರು.
ತಹಸೀಲ್ದಾರ್ ಶ್ರೀಧರ ಕಂಕನವಾಡಿ, ಪುರಸಭೆ ಅಧ್ಯಕ್ಷ ಅಕ್ರಂ ಶರೀಫ್, ಸದಸ್ಯರಾದ ತೀರ್ಥಕುಮಾರಿ ವೆಂಕಟೇಶ್, ರತ್ನ ಸತ್ಯನಾರಾಯಣ, ಶ್ರೀನಿವಾಸ, ಮುಖ್ಯಾಧಿಕಾರಿ ಬಸವರಾಜ್ ಶಿಗ್ಗಾವಿ, ದೇಗುಲದ ಇಒ ಯೋಗೀಶ್, ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್ಟರ್, ನರಸಿಂಹ ಪ್ರಿಯಾ ಭಟ್ಟರ್ ಇದ್ದರು.