ಹೊಳೆನರಸೀಪುರ ಪಟ್ಟಣದ ಸೆಸ್ಕ್ ಕಚೇರಿಯ ಮುಂಭಾಗ ಕೆಪಿಟಿಸಿಎಲ್‌ಅನ್ನು ಖಾಸಗಿಯವರಿಗೆ ಒಪ್ಪಿಸಬಾರದು ಎಂದು ಆಗ್ರಹಿಸಿ ನೌಕರರು ಸಂಘ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಕುಮಾರ್, ಗೋಕುಲ್, ಪ್ರಸಾದ್, ನಟೇಶ್, ಬಸವರಾಜಪ್ಪ, ದಿವಾಕರ್, ಸಂತೋಷ್ ಕುಮಾರ್ ಇತರರು ಇದ್ದರು. 
ಹಾಸನ

ಸರ್ಕಾರ ತನ್ನ ನೀತಿಯಿಂದ ಹಿಂದೆ ಸರಿಯಲಿ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • government backtrack on its policy
ಹೊಳೆನರಸೀಪುರ: ರಾಜ್ಯದಲ್ಲಿ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರ ತನ್ನ ನೀತಿಯನ್ನು ಕೂಡಲೇ ಕೈಬಿಡಬೇಕೆಂದು ಕೆಪಿಟಿಸಿಎಲ್ ಕಾರ್ಯಪಾಲಕ ಇಂಜಿನಿಯರ್ ಕೆ. ಗೋಕುಲ್ ಆಗ್ರಹಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಚೇರಿಯ ಮುಂದೆ ನೂರಾರು ನೌಕರರು ಮತ್ತು ರೈತ ಪರ ಸಂಘಟನೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ವಿದ್ಯುತ್ ಕಾಯ್ದೆ ಅನ್ವಯ ವಿದ್ಯುತ್ ಕಂಪನಿಗಳನ್ನು ಟಾಟಾ ಪವರ್ ಎಂಬ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲು ಪ್ರಸ್ತಾವನೆ ಸಲ್ಲಿಸಿದೆ. ಖಾಸಗಿ ಕಂಪನಿಗಳ ಮೂಲ ಉದ್ದೇಶ ಲಾಭವೇ ಹೊರತು ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವುದಲ್ಲ. ಖಾಸಗಿ ಸಂಸ್ಥೆಯು ರಾಜ್ಯ ವಿದ್ಯುತ್ ವಿತರಣೆ ಕ್ಷೇತ್ರಕ್ಕೆ ಬರಲು ಬಯಸಿ ಅರ್ಜಿ ಸಲ್ಲಿಸಿರುವುದರಿಂದ ನಿಗಮದ ನೌಕರರು ಮತ್ತು ಗ್ರಾಹಕರಿಗೆ ಭವಿಷ್ಯದಲ್ಲಿ ಸಂಕಷ್ಟ ಎದುರಾಗಲಿದೆ. ಸುಮಾರು 62,000 ನೌಕರರಿಗೆ ಮತ್ತು ಅವಲಂಬಿತ ಕುಟುಂಬಸ್ಥರಿಗೆ ತೊಂದರೆ ಉಂಟಾಗುತ್ತದೆ.
ಕೆಪಿಟಿಸಿಎಲ್‌ನ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎಸ್. ಕುಮಾರ ಮಾತನಾಡಿ, ಸರ್ಕಾರವು ಹಲವು ವರ್ಷಗಳ ಕಾಲ ಸಾರ್ವಜನಿಕರ ಹಣದಿಂದ ನಿರ್ಮಿಸಿದ ವಿದ್ಯುತ್ ಜಾಲ ಮತ್ತು ಮೂಲ ಸೌಕರ್ಯಗಳನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುತ್ತಿರುವುದು ನ್ಯಾಯ ಸಮ್ಮತವಲ್ಲ. ಹೀಗೆ ಮಾಡಿದರೆ ವಿದ್ಯುತ್ ದರದಲ್ಲಿ ಭಾರಿ ಏರಿಕೆಯಾಗಲಿದೆ. ಇದರಿಂದ ಸಾಮಾನ್ಯ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಣ್ಣ ಮತ್ತು ಮಧ್ಯಮ ಗುಡಿ ಕೈಗಾರಿಕೆಗಳಿಗೆ ಹೊಡೆತ ಬೀಳಲಿದೆ ಎಂದು ತಿಳಿಸಿದರು.
ರಾಜ್ಯದ ಜನರ ಹಿತಾಶಕ್ತಿ, ರೈತರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ವಿದ್ಯುತ್ ಕಂಪನಿಗಳನ್ನು ಸರ್ಕಾರದ ಅಧೀನದಲ್ಲಿಯೇ ಮುಂದುವರಿಸಬೇಕು. ಇಲ್ಲದೆ ಇದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕ.ವಿ.ಪ್ರ. ನಿ. ಸ್ಥಳೀಯ ಸಮಿತಿ ಅಧ್ಯಕ್ಷ ನಟೇಶ್, ಉಪಾಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ದಿವಾಕರ್, ಸಹಕಾರಿ ದರ್ಶಿ ಸಂತೋಷ್ ಕುಮಾರ್, ಖಜಾಂಚಿ ಕಿರಣ್ ಕುಮಾರ್, ನಿರ್ದೇಶಕರಾದ ಪುಣಿರಾಜ್, ದಿನೇಶ್, ಪ್ರಸನ್ನ, ಆನಂದ, ಹಾಸನ ಜಿಲ್ಲಾ ಎಸ್ಸಿ, ಎಸ್ಟಿ ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ, ಚಂದ್ರಶೇಖರ್, ಸ್ಥಳೀಯ ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಭಾಗಿಯಾಗಿದ್ದರು.