ಸಕಲೇಶಪುರ ಅಗ್ರಹಾರ ಬಡಾವಣೆಯಲ್ಲಿ ಉಂಟಾಗಿರುವ ಜಾಗದ ವಿವಾದವನ್ನು ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಸಕಲೇಶಪುರ: ಅಗ್ರಹಾರ ಬಡಾವಣೆಯಲ್ಲಿ ಉಂಟಾಗಿರುವ ಜಾಗದ ವಿವಾದವನ್ನು ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ವಾರ್ಡ್ ನಂ 4 ಬಸವನಹಳ್ಳಿ ಹಾಗೂ ಅಗ್ರಹಾರ ವ್ಯಾಪ್ತಿಯ ಜಾಗವೊಂದರ ಮಾಲೀಕತ್ವದ ಕುರಿತು ವಿವಾದವಾಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರೊಡನೆ ಮಾತನಾಡಿದ ಅವರು, ಬಸವನಹಳ್ಳಿ ಸಮೀಪ ಇರುವ ಖಾಲಿ ಜಾಗ ನಮಗೆ ಸೇರಿದೆ ಎಂದು ಕೆಲವರು ಶೆಡ್ ಹಾಕಿದ್ದಾರೆ. ಆದರೆ ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಸರ್ವೆ ಮಾಡಿ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾನೆ. ಅಧಿಕಾರಿಗಳು ಕಾನೂನಾತ್ಮಕವಾಗಿ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಯಾರು ಸಹ ಶಾಂತಿ ಕದಡಲು ಮುಂದಾಗಬಾರದು ಎಂದು ತಿಳಿಸಿದರು.
ಬಸವನಹಳ್ಳಿ ನಿವಾಸಿ ಮಧುಕುಮಾರ್ ಮಾತನಾಡಿ, ತಲೆ ತಲಾಂತರಗಳಿಂದ ನಾವು ಈ ಜಾಗದ ಮಾಲೀಕತ್ವವನ್ನು ಹೊಂದಿದ್ದೇವೆ. ಆದರೆ ಕೆಲವರು ಇಲ್ಲ ಸಲ್ಲದ ದಾಖಲಾತಿಗಳನ್ನು ತಂದು ಈ ಜಾಗ ಹರಿಜನ ಕೇರಿಗೆ ಸೇರುತ್ತದೆ ಎಂದು ಶೆಡ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ನಮ್ಮ ಜಾಗದ ಎಲ್ಲ ದಾಖಲಾತಿಗಳು ನಮ್ಮ ಬಳಿ ಇವೆ ಎಂದರು.
ಬಿಎಸ್‌ಪಿ ಮುಖಂಡ ಹರೀಶ್ ಅತ್ನಿ ಮಾತನಾಡಿ, ಬಸವನಹಳ್ಳಿಯಲ್ಲಿ ದಲಿತರಿಗಾಗಿ 20 ಗುಂಟೆ ಜಾಗ ಮೀಸಲಿಡಲಾಗಿದೆ. ಆದರೆ ಇದನ್ನು ಪ್ರಭಾವಿಗಳು ನಕಲಿ ಹಕ್ಕುಪತ್ರ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ದಲಿತರು ಇಲ್ಲಿ ಶೆಡ್ ಹಾಕಿಕೊಂಡಿದಕ್ಕೆ ಕೆಲವರು ಬೆದರಿಕೆ ಹಾಕಿದ್ದಾರೆ. ದಲಿತರ ಜಾಗವನ್ನು ದಲಿತರಿಗೆ ಕೊಡಬೇಕು ಹಾಗೂ ಗ್ರಾಮ ಠಾಣಾ ಜಾಗವನ್ನು ನಿವೇಶನ ರಹಿತರಿಗೆ ಕೊಡಬೇಕು. ಈ ನಿಟ್ಟಿನಲ್ಲಿ ಶಾಸಕರು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಕೀಲ ಸುಧೀಶ್, ಬಸವನಹಳ್ಳಿ ಧರ್ಮೇಶ್, ಬಿಎಸ್‌ಪಿ ತಾಲೂಕು ಅಧ್ಯಕ್ಷ ವಿರೇಶ್, ಶಾಂತು ಅಗ್ರಹಾರ ಇತರರು ಇದ್ದರು.