ಮಾರುತಿ ನಗರ ಬಡಾವಣೆಯ ವಾರ್ಡ್ ಸಂಖ್ಯೆ 31ರಲ್ಲಿ ನಗರಸಭೆ ಮಾಜಿ ಸದಸ್ಯೆ ಸುಜಾತ ರಮೇಶ್ ಮತ್ತು ಸ್ನೇಹಿತರ ಬಳಗದ ವತಿಯಿಂದ ಅಂದಾಜು ಐದು ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಮನೆಯ ಕೀಲಿಯನ್ನು ತನುಜಾ ಶಶಿಧರ್ ಕುಟುಂಬಕ್ಕೆ ಹಸ್ತಾಂತರಿಸಿದ ಸಂಸರ್ಭ. ಆರ್.ಅನಂತ ಕುಮಾರ್, ಸುಜಾತಾ ರಮೇಶ್, ಕಿರಣ್ ಕುಮಾರ್, ಸಂತೋಷ್, ಜಗನ್ನಾಥ ರೈ ಇತರರಿದ್ದರು. 
ಹಾಸನ

ದುರ್ಬಲರಿಗೆ ಸಂಘ-ಸಂಸ್ಥೆ ನೆರವಿಗೆ ಧಾವಿಸಲಿ

ಲೋಕೇಶ್ ಮನು. ಡಿ
ಅರಸೀಕೆರೆ: ಸಮಾಜದಲ್ಲಿ ಸಂಕಷ್ಟಕ್ಕೆ ಸಿಲುಕಿದ ದೀನ, ದುರ್ಬಲರಿಗೆ ಸರ್ಕಾರದ ಜತೆಗೆ ಸಂಘ- ಸಂಸ್ಥೆಗಳು ನೆರವಿಗೆ ಧಾವಿಸಬೇಕು ಎಂದು ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಆರ್.ಅನಂತಕುಮಾರ್ ಹೇಳಿದರು.
ಮಾರುತಿನಗರ ಬಡಾವಣೆಯ ವಾರ್ಡ್ ಸಂಖ್ಯೆ 31ರಲ್ಲಿ ನಗರಸಭೆ ಮಾಜಿ ಸದಸ್ಯೆ ಸುಜಾತಾ ರಮೇಶ್ ಮತ್ತು ಸ್ನೇಹಿತರ ಬಳಗದ ವತಿಯಿಂದ ಅಂದಾಜು ಐದು ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಮನೆಯ ಕೀಲಿಯನ್ನು ತನುಜಾ ಶಶಿಧರ್ ಕುಟುಂಬಕ್ಕೆ ಸೋಮವಾರ ಹಸ್ತಾಂತರಿಸಿ ಮಾತನಾಡಿದರು.
ಪ್ರತಿಯೊಂದು ಕುಟುಂಬಕ್ಕೂ ಸ್ವಂತ ಸೂರು ಹೊಂದಬೇಕು ಎನ್ನುವ ಹಂಬಲವಿದೆ. ಸರ್ಕಾರ ಕೂಡ ವಿವಿಧ ಯೋಜನೆಗಳಡಿ ಮನೆ ಕಟ್ಟಿಸಿಕೊಡುವ ಕೆಲಸ ಮಾಡಿಕೊಂಡು ಬರುತ್ತಿವೆ. ಇದರೊಂದಿಗೆ ಸಂಘ-ಸಂಸ್ಥೆ ಕೂಡ ಕೈ ಜೋಡಿಸಿ ಬಡವರನ್ನು ಗುರುತಿಸಿ ಇತಿಮಿತಿಯಲ್ಲಿ ಸೂರು ಕಲ್ಪಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಸುಜಾತಾ ರಮೇಶ್ ಬಳಗ ದಿಟ್ಟ ಹೆಜ್ಜೆ ಇಟ್ಟಿದೆ. ಸಮಾಜದಲ್ಲಿ ಸಂಕಷ್ಟಕ್ಕೆ ಸಿಲುಕಿದ ದೀನ, ದುರ್ಬಲರಿಗೆ ಸರ್ಕಾರದ ಜತೆಗೆ ಸಂಘ-ಸಂಸ್ಥೆಗಳು ನೆರವಿಗೆ ಧಾವಿಸಿದಾಗ ಮಾತ್ರವೇ ಸೇವೆಗೆ ಮಹತ್ವ ಬರಲಿದೆ ಎಂದು ಹೇಳಿದರು.
ಸಮಾಜ ಸೇವಕ ರಮೇಶ್ ಮಾತನಾಡಿ, ದಾನಿ ಆರ್.ಅನಂತ್‌ಕುಮಾರ್ ಅವರ ಕಾಳಜಿ, ಸಹಾಯ ಮಾಡುವ ಮನಸ್ಸು ನಮ್ಮ ಕೆಲಸಕ್ಕೆ ಪ್ರೇರಣೆ ನೀಡಿದೆ. ನಾಲ್ಕು ವರ್ಷದಿಂದ ಸತತವಾಗಿ ಬಡಕುಟುಂಬಕ್ಕೆ ಒಂದೊಂದು ಮನೆ ನಿರ್ಮಿಸಿಕೊಡಲು ನೆರವಿನ ಹಸ್ತ ಚಾಚಿದ್ದಾರೆ. ಬಳಗದ ಅಳಿಲು ಸೇವೆಯಿಂದ ಕುಟುಂಬಗಳು ನೆಮ್ಮದಿಯಿಂದ ಜೀವನ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದರು.
ತಂತ್ರಜ್ಞ ಜಗನ್ನಾಥ ರೈ ಮಾತನಾಡಿ, ಶಿಕ್ಷಣ ಹಾಗೂ ಸಮಾಜ ಸೇವೆಯಲ್ಲಿ ಅನಂತಕುಮಾರ್ ಕೊಡುಗೆ ಬೆಳೆದು ಬಂದ ದಾರಿಯನ್ನು ಸವಿಸ್ತಾರವಾಗಿ ತಿಳಿಸಿದರು.
ನಗರಸಭೆ ಮಾಜಿ ಸದಸ್ಯೆ ಸುಜಾತಾ, ಮುಖಂಡರಾದ ರಮೇಶ್, ಕರವೇ ಜಿಲ್ಲಾ ಉಪಾಧ್ಯಕ್ಷ ತುಳಸಿದಾಸ್, ತಾಲೂಕು ಅಧ್ಯಕ್ಷ ಕಿರಣ್ ಕುಮಾರ್, ನಗರಾಧ್ಯಕ್ಷ ಸಂತೋಷ, ನಯಾಜ್ ಅಹಮ್ಮದ್, ರಿಜ್ವ್ವಾನ್ ಇತರರು ಇದ್ದರು.