ಹಾಸನ ನಗರದ ಕೆ.ಆರ್.ಪುರಂನಲ್ಲಿರುವ ಶ್ರೀ ಶಂಕರ ಮಠದಲ್ಲಿ ಪತಂಜಲಿ ಪರಿವಾರ ಕರ್ನಾಟಕದ ವತಿಯಿಂದ ಜರುಗಿದ ಮಹಾ ಸತ್ಸಂಗ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಾಧ್ವಿ ದೇವಪ್ರಿಯ ಮಾತಾ ಜೀ, ಪೂಜ್ಯ ಸ್ವಾಮಿ ಪರಮಾರ್ಥ ದೇವ ಜೀ, ಭವರ್ಲಾಲ್, ಪರಮೇಶ್ವರ ಸುಪರ್ಣಸ, ಸುರೇಶ್ ಪ್ರಜಾಪತಿ, ಶೇಷಪ್ಪ, ಲೋಕನಾಥ್, ಗಿರೀಶ್, ನಾಗೇಶ್, ಕೇಶವಮೂರ್ತಿ, ನಟರಾಜ್ ಇತರರಿದ್ದರು.
- ಮುಂದಿನ ಪೀಳಿಗೆಗೆ ಹಿಂದೂ ಸಂಸ್ಕೃತಿ ವರ್ಗವಾಗಲಿ
- ಪತಂಜಲಿ ಯೋಗ ಪೀಠದ ದಕ್ಷಿಣ ಭಾರತ ಪ್ರಭಾರಿ ಸ್ವಾಮಿ ಪರಮಾರ್ಥ ದೇವಜೀ ಸಲಹೆ
ಹಾಸನ: ಇಂದಿನ ಸಂಕೀರ್ಣ ಸಮಾಜದಲ್ಲಿ ಹಿಂದೂ ಸನಾತನ ಸಂಸ್ಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಮಾನವೀಯತೆಯೊಂದಿಗೆ ವರ್ಗಾಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಪತಂಜಲಿ ಯೋಗ ಪೀಠದ ದಕ್ಷಿಣ ಭಾರತ ಪ್ರಭಾರಿ ಸ್ವಾಮಿ ಪರಮಾರ್ಥ ದೇವಜೀ ಹೇಳಿದರು.
ನಗರದ ಕೆ.ಆರ್.ಪುರಂನಲ್ಲಿರುವ ಶ್ರೀ ಶಂಕರ ಮಠದಲ್ಲಿ ಪತಂಜಲಿ ಪರಿವಾರ ಕರ್ನಾಟಕದ ವತಿಯಿಂದ ಸಾಧ್ವಿ ದೇವಪ್ರಿಯ ಮಾತಾ ಜೀ ಹಾಗೂ ಸ್ವಾಮಿ ಪರಮಾರ್ಥ ದೇವ ಜೀ ಅವರ ಸಾನ್ನಿಧ್ಯದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಾ ಸತ್ಸಂಗ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗ ಕೇವಲ ದೇಹಾರೋಗ್ಯಕ್ಕೆ ಮಾತ್ರವಲ್ಲ, ಮನಸ್ಸು ಮತ್ತು ಆತ್ಮಶುದ್ಧಿಗೂ ಅವಶ್ಯಕವಾಗಿದೆ. ಸನಾತನ ಧರ್ಮ ಉಳಿವಿಗಾಗಿ ಯೋಗದೊಂದಿಗೆ ಯೋಗದ ಮಾರ್ಗದಲ್ಲೇ ಸಾಗಬೇಕು ಎಂದರು.
ಮಾನವೀಯತೆಯೇ ಮನುಷ್ಯನ ಅಸ್ತಿತ್ವದ ಮೂಲ. ಲೋಕದಲ್ಲಿ ಪಶು ಸ್ವಭಾವದಂತೆ ಬದುಕುವವರು, ಮನುಷ್ಯರಂತೆ ಬದುಕುವವರು ಹಾಗೂ ದೇವರಂತೆ ಜೀವನ ಸಾಗಿಸುವವರು ಎಂಬ ಮೂರು ರೀತಿಯ ಜನರು ಇರುತ್ತಾರೆ ಎಂದರು.
ಎಲ್ಲರೂ ಸಾಧು, ಸನ್ಯಾಸಿಗಳಾಗಲು ಸಾಧ್ಯವಿಲ್ಲವಾದರೂ ಉತ್ತಮ ಮನುಷ್ಯರಾಗಿ ಮಾನವೀಯತೆಯಿಂದ ಬದುಕಿದರೆ ಅದೇ ಶ್ರೇಷ್ಠ ಜೀವನ ಎಂದು ಹೇಳಿದರು.
ದೇಶದ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪರಂಪರೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಸ್ವದೇಶಿ ಚಿಂತನೆ ಅಳವಡಿಸಿಕೊಂಡು ಬದುಕುವುದರಿಂದ ಅದು ದೊಡ್ಡ ಮಟ್ಟದ ದೇಶಸೇವೆಯೇ ಆಗುತ್ತದೆ ಎಂದು ಸಲಹೆ ನೀಡಿದರು.
ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದ್ದು, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಬೇಕು ಎಂದರು.
ಹರಿದ್ವಾರ ಪತಂಜಲಿ ಯೋಗ ಪೀಠದ ಸಾಧ್ವಿ ದೇವಪ್ರಿಯಾ ದೀದೀಜಿ ಮಾತನಾಡಿ, ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ದೇಶದ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಕಾಪಾಡಿಕೊಂಡು, ಸ್ವದೇಶಿ ಚಿಂತನೆ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಸದೃಢವಾಗುತ್ತದೆ ಎಂದರು. ಪತಂಜಲಿ ಯೋಗವನ್ನು ಮನೆ ಮನೆಗೂ ಹರಡಬೇಕು ಎಂದು ಸಲಹೆ ನೀಡಿದರು.
ಮಹಾ ಸತ್ಸಂಗಕ್ಕೂ ಮೊದಲು ಅಗ್ನಿಹೋತ್ರದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು, ಯೋಗಾಸಕ್ತರು ಹಾಗೂ ಪತಂಜಲಿ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಯಿತು.
ಪತಂಜಲಿ ರಾಜ್ಯಪ್ರಭಾರಿ ಭವರ್ಲಾಲ್, ರಾಜ್ಯಸಮಿತಿ ಸದಸ್ಯರಾದ ಪರಮೇಶ್ವರ ಸುಪರ್ಣಸ, ಸುರೇಶ್ ಪ್ರಜಾಪತಿ, ಶೇಷಪ್ಪ, ಲೋಕನಾಥ್, ಗಿರೀಶ್, ನಾಗೇಶ್, ಕೇಶವಮೂರ್ತಿ, ನಟರಾಜ್, ಶಾರದಾ, ಮಂಜುಳಾ, ಪವಿತ್ರಾ, ಕವಿತಾ, ರೀತಾ, ರೂಪಾ, ರಾಜ್ಯ ಯಜ್ಞ ಪ್ರಭಾರಿಗಳಾದ, ಹರಿಹರಪುರ ಶ್ರೀಧರ್ ಇತರರು ಇದ್ದರು.