ಹಾಸನದ ರೆಡ್ ಕ್ರಾಸ್ ಭವನದಲ್ಲಿ ಡಿಸಿ ಲತಾಕುಮಾರಿ ಮಾತನಾಡಿದರು. ಡಾ.ಚೈತ್ರಾ, ಕುಮಾರ್, ಶಿಲ್ಪಾ, ಧರಣಿ ಕುಮಾರ್, ಕೆ.ಆರ್ ಅನುಪಮಾ, ಡಾ.ತೇಜಸ್ವಿ ಇತರರಿದ್ದರು. 
ಹಾಸನ

ದೇಶದ ತಲಾ ಆದಾಯಕ್ಕೆ ಹೆಣ್ಣು ಮಕ್ಕಳು ಕೊಡುಗೆ ನೀಡಲಿ

ಪ್ರಮುಖ ಮುಖ್ಯಾಂಶಗಳು

  • ದೇಶದ ತಲಾ ಆದಾಯಕ್ಕೆ ಹೆಣ್ಣು ಮಕ್ಕಳು ಕೊಡುಗೆ ನೀಡಲಿ
  • ಜಿಲ್ಲಾಧಿಕಾರಿ ಲತಾಕುಮಾರಿ ಆಶಯ
ಹಾಸನ: ಯಾರ ಮೇಲೂ ಅವಲಂಬಿತವಾಗಿರದೆ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಮಾಡುವ ಮೂಲಕ ದೇಶದ ತಲಾ ಆದಾಯಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಹೆಣ್ಣು ಮಕ್ಕಳಿಗೆ ಸಲಹೆ ನೀಡಿದರು.
ನಗರದ ರೆಡ್ ಕ್ರಾಸ್ ಭವನದಲ್ಲಿ ಇತ್ತೀಚೆಗೆ ಹಾಸ್ಟೆಲ್ ವಿದ್ಯಾರ್ಥಿನಿಯರೊಂದಿಗೆ ಡಿಸಿ ವಿತ್ ಡಿಸ್ಕಷನ್ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದರು. ಸಮಾಜದಲ್ಲಿ ಹೆಣ್ಣನ್ನು ಎರಡನೇ ದರ್ಜೆ ಪ್ರಜೆಯನ್ನಾಗಿ ನೋಡುತ್ತಾರೆ. ಹೆಣ್ಣು ಮಕ್ಕಳನ್ನು ಕೀಳಾಗಿ ನೋಡಲಾಗುತ್ತಿದ್ದು, ಗಟ್ಟಿ ವ್ಯಕ್ತಿತ್ವದೊಂದಿಗೆ ಪ್ರಬುದ್ಧ ಮಹಿಳೆಯಾಗಿ ಬೆಳೆಯಬೇಕು ಎಂದು ತಿಳಿಸಿದರು.
ಪಾಲಕರ ನಂಬಿಕೆ ಹುಸಿಯಾಗದಂತೆ ನಡವಳಿಕೆ ಇರಬೇಕು. ತಪ್ಪು ನಿರ್ಧಾರದಿಂದ ಜೀವನ ಹಾಳುಮಾಡಿಕೊಳ್ಳದೆ ಎಚ್ಚರದಿಂದ ಮುನ್ನಡೆದು ಗೌರವಯುತವಾಗಿ ಜೀವನ ನಡೆಸುವಂತೆ ತಿಳಿಸಿದರು.
ವೈದ್ಯೆ ಡಾ.ಚೈತ್ರಾ ಮಾತನಾಡಿ, ಋತು ಚಕ್ರದ ಸಂದರ್ಭದಲ್ಲಿ ಶುಚಿತ್ವ ಬಹುಮುಖ್ಯ. ಮಕ್ಕಳಲ್ಲಿ ದೈಹಿಕ ಚಟುವಟಿಕೆ ಕಡಿಮೆ ಇರುವುದರಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವುದರ ಜತೆಗೆ ಪಿ.ಸಿ.ಒ.ಡಿ. ಸಮಸ್ಯೆ ಉಂಟಾಗುತ್ತದೆ. ಮುಂದೆ ಮಕ್ಕಳಾಗುವುದಕ್ಕೂ ತೊಂದರೆ ಆಗುತ್ತದೆ. ಹಾಗಾಗಿ ಸಮತೋಲನ ಆಹಾರ ತೆಗೆದುಕೊಳ್ಳುವುದರ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಟೀನೇಜ್ ಗರ್ಭಿಣಿ ಆಗುವುದು ಕೆಟ್ಟದ್ದು. ಆದರೂ ಇದು ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆಕರ್ಷಿತರಾಗಿ ಸ್ನೇಹ ಬೆಳೆಸಿ ನಂತರ ಬಾಲ ಗರ್ಭಿಣಿ ಹಂತಕ್ಕೆ ತಲುಪುತ್ತಿದ್ದಾರೆ. ಪ್ರಕೃತಿದತ್ತವಾಗಿ ಹದಿಹರೆಯದಲ್ಲಿ ಮನಸ್ಸಿನ ಚಂಚಲತೆಯಿಂದ ಆಕರ್ಷಣೆಗೆ ಒಳಗಾಗುವುದು ಸಹಜ. ಆದರೆ ಅದನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ಓದಿನ ಕಡೆಗೆ ಗಮನಹರಿಸಬೇಕು ಎಂದರು.
ಮಕ್ಕಳು ಶಿಕ್ಷಣದ ಕಡೆಗೆ ಗಮನ ನೀಡದಿರುವುದರಿಂದ ಪಾಲಕರು ಬಾಲ್ಯ ವಿವಾಹ ಮಾಡುತ್ತಾರೆ. ಮಾನಸಿಕ ಮತ್ತು ದೈಹಿಕವಾಗಿ ಸದೃಢಗೊಂಡಿರುವುದಿಲ್ಲ. ಟೀನೇಜ್‌ನಲ್ಲಿ ಗರ್ಭಿಣಿ ಆಗುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೆ, 18 ವರ್ಷದೊಳಗಿನವರು ಮದುವೆಯಾಗಿ ಗರ್ಭಿಣಿಯಾದರೆ ಬಾಲ ಗರ್ಭಿಣಿ ಎಂದು ಪರಿಗಣಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗುವುದು ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕುಮಾರ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಿಲ್ಪಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಧರಣಿ ಕುಮಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಆರ್.ಅನುಪಮಾ, ಡಾ.ತೇಜಸ್ವಿ ಇತರರಿದ್ದರು.