ಬೇಲೂರಿನ ಡಾ.ಅಂಬೇಡ್ಕರ್ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ, ನಂತರ ಮೆರವಣಿಗೆಗೆ ಚಾಲನೆ ನೀಡುತ್ತಿರುವ ಶಾಸಕ ಎಚ್.ಕೆ.ಸುರೇಶ್ ಇತರರು 
ಹಾಸನ

ಆಶಯ ಈಡೇರುವುದರೊಂದಿಗೆ ಎಲ್ಲರಿಗೂ ತಿಳಿಯಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ.ಸುರೇಶ್ ಆಶಯ
ಬೇಲೂರು : ಸಂವಿಧಾನ ದಿನಾಚರಣೆ ಅಂಗವಾಗಿ ಬುಧವಾರ ಪಟ್ಟಣದ ಡಾ.ಅಂಬೇಡ್ಕರ್ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ತಾಲೂಕು ಆಡಳಿತದಿಂದ ಮಾಲಾರ್ಪಣೆ ಸಲ್ಲಿಸಲಾಯಿತು.
ಇದೇ ವೇಳೆ ಅಂಬೇಡ್ಕರ್ ವೃತ್ತದಿಂದ ಬಸ್ ನಿಲ್ದಾಣ ಮುಂಭಾಗದ ಅಂಬೇಡ್ಕರ್ ಭವನದವರೆಗೆ ಸಂವಿಧಾನ ಪೀಠಿಕೆ ಹಾಗೂ ಡಾ.ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಡಾ.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರ ಮತ್ತು ಸಂವಿಧಾನ ಪೀಠಿಕೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ದೇಶದ ಜನರಿಗೆ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಕೊಡಿಸಿದವರು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಎಂದು ಸ್ಮರಿಸಿದರು.
ಭಾವೈಕ್ಯತೆ, ಸಹೋದರತೆ, ಸಮಾನತೆ ಹಾಗೂ ಸಮ ಸಮಾಜ ನಿರ್ಮಾಣಕ್ಕಾಗಿ ಡಾ.ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ಭಾರತಕ್ಕೆ 1949ರ ನ.26 ರಂದು ಭಾರತದ ಸಂವಿಧಾನ ದಿನದಂದು ಸಂಪೂರ್ಣ ಸ್ವಾತಂತ್ರ್ಯ ದೊರಕಿಸಿ ಕೊಟ್ಟ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಸಂವಿಧಾನವನ್ನು ಡಾ.ಅಂಬೇಡ್ಕರ್ ಅವರು ದೇಶಕ್ಕೆ ಸಮರ್ಪಿಸಿ 76 ವರ್ಷವಾಗಿದ್ದು, ಈ ದಿನವನ್ನು ದೇಶವೇ ಆಚರಿಸುತ್ತಿದೆ. ನಮ್ಮ ಸಂವಿಧಾನದ ಆಶಯಗಳು ಈಡೇರುವುದರ ಜತೆಗೆ ಎಲ್ಲರಿಗೂ ತಿಳಿಯುವಂತಾಗಬೇಕು ಎಂದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಮಾತನಾಡಿ, ಡಾ.ಅಂಬೇಡ್ಕರ್‌ರ ಸಂವಿಧಾನಕ್ಕೆ 76 ವರ್ಷ ತುಂಬಿದೆ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು, ಅವಕಾಶ ಕಲ್ಪಿಸಿ ಕೊಟ್ಟಿದ್ದರಿಂದಲೇ ನಾವುಗಳು ಇಂದು ದೇಶದಲ್ಲಿ ಉತ್ತಮ ಪ್ರಜೆಗಳಾಗಿ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಅಂಬೇಡ್ಕರ್‌ರನ್ನು ಪ್ರತಿದಿನ ನೆನಪಿಸಿಕೊಳ್ಳಬೇಕು. ಜತೆಗೆ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಅಂಶಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಪಂ ಮಾಜಿ ಸದಸ್ಯರಾದ ಲತಾ ಮಂಜೇಶ್ವರಿ, ಸಿ.ಎಸ್.ಪ್ರಕಾಶ್, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು, ಅಧೀಕ್ಷಕ ಭೈರಯ್ಯ, ತಾಪಂ ಇಒ ಸತೀಶ್, ಬಿಇಒ ಭಾಗ್ಯಮ್ಮ, ಬಿಆರ್‌ಸಿ ಶಿವಮರಿಯಪ್ಪ, ಪುರಸಭೆ ಸದಸ್ಯ ಜಮಾಲೂದ್ದೀನ್, ಬಿಎಸ್‌ಪಿ ಮುಖಂಡ ಗಂಗಾಧರ್ ಬಹುಜನ್, ದಲಿತ ಮುಖಂಡರಾದ ಮರಿಯಪ್ಪ, ಪರ್ವತಯ್ಯ, ಮಂಜುನಾಥ್, ದಸಂಸ(ಅಂಬೇಡ್ಕರ್ ವಾದ)ವಿಭಾಗಿಯ ಸಂ. ಸಂಚಾಲಕ ಲಕ್ಷ್ಮಣ್, ರಮೇಶ್ ತೆಂಡೇಕೆರೆ, ಬಾಬು, ಹರೀಶ್, ವಸಂತ ಕುಮಾರ್ ಇತರರಿದ್ದರು.
ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಪ್ರಭಂದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.