ಹಾಸನ ನಗರದ ಆರ್.ಸಿ. ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ಓದು ಅಭಿಯಾನದ-ಕರ್ನಾಟಕ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹೈಕೋರ್ಟ್ ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನದಾಸ್ ಉದ್ಘಾಟಿಸಿದರು. ಪ್ರೊ.ಟಿ.ಸಿ.ತಾರಾನಾಥ್, ಡಿ.ಕೆ. ಮಂಜಯ್ಯ, ಬಿ. ರಾಜಶೇಖರ ಮೂರ್ತಿ, ರಾಜು ಗೊರುರು, ರಾಜಶೇಖರ್, ಜಿ.ಆರ್. ಮೋಹನ್ ಕುಮಾರ್ ಇತರರಿದ್ದರು. 
ಹಾಸನ

ಎಲ್ಲರಿಗೂ ಸಂವಿಧಾನದ ಅರಿವಿರಲಿ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಎಲ್ಲರಿಗೂ ಸಂವಿಧಾನದ ಅರಿವಿರಲಿ
  • ಹೈಕೋಟ್ ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನದಾಸ್ ಹೇಳಿಕೆ
  • ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ
ಹಾಸನ: ಭಾರತದ ಸಂವಿಧಾನವು ಈ ದೇಶದ ನಾಗರಿಕರ ರಕ್ಷಾ ಕವಚವಾಗಿದ್ದು, ಪ್ರತಿಯೊಬ್ಬರಿಗೂ ಸಂವಿಧಾನವೇ ಶ್ರೇಷ್ಠ ಗ್ರಂಥವಾಗಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನದಾಸ್ ಹೇಳಿದರು.
ನಗರದ ಆರ್.ಸಿ. ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಸಂವಿಧಾನ ಓದು ಅಭಿಯಾನದ-ಕರ್ನಾಟಕ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಕುರಿತು ಪ್ರಥಮ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಜಾರಿಗೆ ಬಂದು 75 ವರ್ಷ ಕಳೆದಿದ್ದು, ಸಂವಿಧಾನದಲ್ಲಿರುವ ಆಶಯಗಳಂತೆ ಸಂಪೂರ್ಣ ಸಾಧನೆ ಮಾಡಲು ಇನ್ನು ಸಾಧ್ಯವಾಗಿಲ್ಲ. ಸರ್ಕಾರಗಳು ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬೇಕು. ಸಂವಿಧಾನ ಅರ್ಥ ಮಾಡಿಕೊಳ್ಳುವ ಹಾಗೆ ಜನಸಾಮಾನ್ಯರಿಗೆ ಸರಳೀಕೃತವಾಗಿ ಇದರ ಬಗ್ಗೆ ತಿಳಿಸಿಕೊಡುವ ಕೆಲಸಗಳು ಆಗಬೇಕಿದೆ. ಯುವ ಸಮುದಾಯ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ನಂತರ ಅದರಲ್ಲಿರುವ ಹಕ್ಕುಗಳ ಬಗ್ಗೆ ಸಮಾಜದಲ್ಲಿರುವ ಪ್ರತಿಯೊಬ್ಬರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದರು.
ಹಾಸನ ವಿವಿ ಕುಲಪತಿ ಪ್ರೊ.ಟಿ.ಸಿ.ತಾರಾನಾಥ್ ಮಾತನಾಡಿ, ವಿಶ್ವದಲ್ಲೇ ಶ್ರೇಷ್ಠವಾದ ಸಂವಿಧಾನದ ಬಗ್ಗೆ ಯುವಪೀಳಿಗೆ ತಿಳಿದು ಇತರರಿಗೂ ತಿಳಿಸಿಕೊಡುವ ಕೆಲಸ ಮಾಡಬೇಕು. ಹಾಗೆಯೇ ಜೀವನದಲ್ಲಿ ಸದೃಢವಾದ ಮನಸ್ಸನ್ನು ಇಟ್ಟುಕೊಂಡು ತಮ್ಮ ಗುರಿ ಸಾಧನೆ ಕಡೆ ಹೆಜ್ಜೆ ಹಾಕಬೇಕು. ಗುರು, ಹಿರಿಯರ ಹಿತನುಡಿಗಳನ್ನು ಆಲಿಸಿಕೊಂಡು ಪಾಲನೆ ಮಾಡುವುದರ ಮೂಲಕ ಸಮಾಜದಲ್ಲಿ ಒಬ್ಬ ಒಳ್ಳೆಯ ನಾಗರಿಕನಾಗಿ ರೂಪುಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಮಂಜಯ್ಯ ಮಾತನಾಡಿ, ಸಂವಿಧಾನ ಓದು ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು 210ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಸಂವಿಧಾನದ ಕುರಿತಂತೆ ನೀಡಿದ್ದ ವಿವಿಧ ವಿಷಯಗಳ ಮೇಲೆ ಪ್ರಬಂಧ ರಚನೆ ಮಾಡಿದ್ದರು ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಆರ್.ಸಿ. ರಸ್ತೆ ಗಂಧದಕೋಠಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಬಿ.ಪಿ.ಭುವನ (ಪ್ರಥಮ), ಹಾಸನ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ರೋಷಿಣಿ ಮಹೇಂದ್ರ (ದ್ವಿತೀಯ), ನಗರದ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿನಿ ಟಿ.ವರ್ಷ, ಆರ್.ಸಿ. ರಸ್ತೆ ಗಂಧದಕೋಠಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಕೃಪಾ(ತೃತೀಯ) ಬಹುಮಾನ ಪಡೆದರು.
ಸಮಾಧಾನಕರ ಬಹುಮಾನವನ್ನು ಕಲಾ ಕಾಲೇಜಿನ ವಿನಯ್, ಆರ್.ಸಿ.ರಸ್ತೆ ಗಂಧದಕೋಠಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಾದ ದೀಪ್ತಿ, ದರ್ಶಿನಿ, ಚಂದನಾ, ಚನ್ನರಾಯಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚಂದನಾ, ಪ್ರಿಯಾಂಕಾ, ನಗರದ ಮಲ್ನಾಡ್ ಕಾಲೇಜಿನ ಸಂತೋಷ್, ಕೊಣನೂರು ಪದವಿ ಕಾಲೇಜಿನ ಅಭಿಷೇಕ್ ಹಾಗೂ ಜಾವಗಲ್ ಪದವಿ ಕಾಲೇಜಿನ ಉಷಾ ಸೇರಿದಂತೆ ಎಲ್ಲರಿಗೂ ನಗದು ಬಹುಮಾನ ನೀಡಲಾಯಿತು.