ಪಟ್ಟಣದ ಜೆಪಿ ನಗರದಲ್ಲಿ ಪ್ರಾರಂಭವಾದ ಶ್ರೀನಾಟ್ಯಕಲಾ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ಶಾಲೆಯನ್ನು ಗಣ್ಯರು ಉದ್ಘಾಟಿಸಿದರು.
- ಕುರುಬರ ಸಂಘದ ಜಿಲ್ಲಾ ನಿರ್ದೇಶಕ ಬಿ.ಎಂ.ಸಂತೋಷ್ ಸಲಹೆ
ಬೇಲೂರು : ಇತ್ತೀಚಿನ ದಿನಗಳಲ್ಲಿ ಮಕ್ಕಳು, ದೊಡ್ಡವರೆನ್ನದೆ ಎಲ್ಲರೂ ಹೆಚ್ಚಿನ ಸಮಯ ಮೊಬೈಲ್‌ನಲ್ಲೇ ಕಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡಬೇಕೆಂದರೆ ಕಲಾ ಚಟುವಟಿಕೆಯಲ್ಲಿ ಭಾಗವಹಿಸಲು ಪಾಲಕರು ಪ್ರೋತ್ಸಾಹಿಸಬೇಕು ಎಂದು ಕುರುಬರ ಸಂಘದ ಜಿಲ್ಲಾ ನಿರ್ದೇಶಕ ಹಾಗೂ ಉದ್ಯಮಿ ಬಿ.ಎಂ.ಸಂತೋಷ್ ಸಲಹೆ ನೀಡಿದರು.
ಪಟ್ಟಣದ ಜೆಪಿ ನಗರದಲ್ಲಿ ಇತ್ತೀಚೆಗೆ ಪ್ರಾರಂಭವಾದ ಶ್ರೀ ನಾಟ್ಯಕಲಾ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಬೇಲೂರು ಶಿಲ್ಪಕಲೆಗೆ ಜಗತ್ಪ್ರಸಿದ್ಧವಾಗಿದ್ದು, ಹೊಯ್ಸಳರ ರಾಜ ವಿಷ್ಣುವರ್ಧನ ತನ್ನ ರಾಣಿ ಶಾಂತಲಾದೇವಿ ಅವರ ನೃತ್ಯಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರೆಂದು ಇತಿಹಾಸ ತಿಳಿಸುತ್ತದೆ. ಆ ಪರಂಪರೆ ಇಂದಿಗೂ ಮುಂದುವರಿದಿದ್ದು ನೃತ್ಯಕಲೆ ಮಾನವನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಬೆರೆತಿದೆ. ನೃತ್ಯದಿಂದ ಮನೋಲ್ಲಾಸ ದೊರಕುವುದಲ್ಲದೆ ದೈಹಿಕ ಹಾಗೂ ಮಾನಸಿಕವಾಗಿ ಪ್ರಯೋಜವಾಗುತ್ತದೆ. ದೇಹ ಸದೃಢಗೊಳ್ಳಲು ಹಾಗೂ ಒತ್ತಡ ನಿವಾರಣೆಗೆ ನೃತ್ಯ ಸಹಕಾರಿಯಾಗಿದೆ. ಆದ್ದರಿಂದ ಮಕ್ಕಳನ್ನು ಮೊಬೈಲ್‌ನಿಂದ ದೂರವಾಗಿಸಿ ಅವರಲ್ಲಿನ ಬದಲಾವಣೆಗಾಗಿ ನೃತ್ಯ ಶಾಲೆಗೆ ಸೇರಿಸಬೇಕು ಎಂದರು.
ಪುರಸಭೆ ಸದಸ್ಯ ಫಯಾಜ್ ಮಾತನಾಡಿ, ಜೆಪಿ ನಗರದ ಮಕ್ಕಳಿಗೆ ದೂರದಲ್ಲಿನ ನೃತ್ಯಶಾಲೆಗೆ ಹೋಗಲು ತೊಂದರೆಯಾಗುತಿತ್ತು. ಈಗ ಇಲ್ಲೇ ನೃತ್ಯಶಾಲೆ ಪ್ರಾರಂಭವಾಗಿರುವುದು ಸಂತೋಷ. ನೃತ್ಯಕ್ಕೆ ಜಾತಿ-ಮತ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಕಲೆಯಾಗಿದ್ದು, ಈ ಶಾಲೆ ಎಲ್ಲರಿಗೂ ಉಪಯೋಗವಾಗಲಿ ಎಂದರು.
ಪೂರ್ಣಪ್ರಜ್ಞ ಶಾಲೆ ಪ್ರಾಂಶುಪಾಲ ಪ್ರಶಾಂತ್ ಮಾತನಾಡಿ, ಈ ಶಾಲೆಯ ನೃತ್ಯ ಶಿಕ್ಷಕ ಅರುಣ್ ಅವರು ಹಲವು ವರ್ಷಗಳಿಂದ ಬೇಲೂರಿನಲ್ಲಿ ಮಕ್ಕಳು ಸೇರಿದಂತೆ ದೊಡ್ಡವರಗೂ ನೃತ್ಯ ಹೇಳಿ ಕೊಡುತ್ತಿದ್ದಾರೆ. ಈಗ ಜೆಪಿ ನಗರದಲ್ಲಿ ಮತ್ತೊಂದು ಶಾಖೆ ಆರಂಭಿಸಿದ್ದು, ಈ ಶಾಖೆಯು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರನ್ನು ಗಳಿಸಲಿ ಎಂದರು.
ಜಿಲ್ಲಾ ಕೆಡಿಪಿ ಸದಸ್ಯ ಸೌಮ್ಯಾಆನಂದ್, ಜಯ ಕರ್ನಾಟಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ನೃತ್ಯಶಾಲೆ ಶಿಕ್ಷಕ ಅರುಣ್, ಪ್ರಕಾಶ್ ಇತರರಿದ್ದರು.