ಬೇಲೂರಿನ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಉದ್ಘಾಟಿಸಿದರು. 
ಹಾಸನ

ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಆಶಯ
ಬೇಲೂರು : ಪಟ್ಟಣ ಸಮೀಪದ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಗುರುವಂದನೆ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಗುರುಭಕ್ತಿ, ಪಾಲಕರ ತ್ಯಾಗದ ಅರಿವು ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಗುರುವಿನ ನೇರ ಉಪದೇಶವಿಲ್ಲದಿದ್ದರೂ ಗುರುವಿನ ಮೂರ್ತಿ ಪ್ರತಿಷ್ಠಾಪಿಸಿ ಏಕ ಚಿತ್ತದಿಂದ ಅಭ್ಯಾಸ ಮಾಡಿದ ಮಹಾ ಭಾರತದ ಏಕಲವ್ಯನ ಗುರು ಭಕ್ತಿ ಸ್ಮರಿಸಬೇಕು ಎಂದರು.
ಪಾಲಕರು ಜನ್ಮ ನೀಡಿದರೆ ಗುರು ಜೀವನದ ದಾರಿ ತೋರಿಸುತ್ತಾರೆ. ಆದ್ದರಿಂದ ಗುರು ಮತ್ತು ಪಾಲಕರ ಮಹತ್ವ ಅರಿತು ಪ್ರತಿಯೊಬ್ಬರೂ ಮುನ್ನಡೆಯಬೇಕು. ಜತೆಗೆ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪಾಲಕರು ಮಕ್ಕಳಿಗಾಗಿ ತ್ಯಾಗ ಮಾಡುವುದನ್ನು ಸ್ಮರಿಸುವ ಮೂಲಕ ಅವರ ಕನಸುಗಳನ್ನು ನನಸಾಗಿಸಬೇಕು ಎಂದು ಸಲಹೆ ನೀಡಿದರು.
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ಎ.ಬಿ.ಶಿವರಾಮು ಮಾತನಾಡಿ, ಪ್ರಿಕೆಜಿಯಿಂದ ಪಿಎಚ್.ಡಿವರೆಗೆ ಸಂಸ್ಥೆಯಿಂದ ಶಿಕ್ಷಣ ಒದಗಿಸಲಾಗುತ್ತಿದೆ. ನಮ್ಮ ಟ್ರಸ್ಟ್ ವ್ಯಾಪ್ತಿಯಲ್ಲಿ 120 ಪಿಯು ಕಾಲೇಜುಗಳಿದ್ದು, 28,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜೆಇಇ ಪರೀಕ್ಷೆಯಲ್ಲಿ 150 ವಿದ್ಯಾರ್ಥಿಗಳು ಶೇ.90 ರಷ್ಟು ಅಧಿಕ ಅಂಕ ಗಳಿಸಿದ್ದಾರೆ. 2013-14 ರಲ್ಲಿ 230 ಇದ್ದ ಡಿಸ್ಟಿಂಕ್ಷನ್ ವಿದ್ಯಾರ್ಥಿಗಳ ಸಂಖ್ಯೆ ನಂತರದ ವರ್ಷಗಳಲ್ಲಿ 1500ಕ್ಕೆ ಏರಿಕೆಯಾಗಿದೆ. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ನಮ್ಮ ಟ್ರಸ್ಟ್‌ನ ಉದ್ದೇಶವಾಗಿದೆ ಎಂದರು.
ಬಿಜಿಎಸ್ ಕಾಲೇಜು ಪ್ರಾಂಶುಪಾಲ ದಿವ್ಯಕುಮಾರ್, ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್ ಸೇರಿದಂತೆ ಇತರರಿದ್ದರು.