ಆಲೂರು ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ವಿರಾಟ್ ವಿಶ್ವಕರ್ಮ ಯುವಕ ಸಂಘದ ಪದಗ್ರಹಣ ಸಮಾರಂಭವನ್ನು ಶಿವಸುಜ್ಞಾನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಬಿ. ಸಿ. ಶಂಕರಾಚಾರ್, ಕೆ. ಎಚ್. ಹೂವಣ್ಣಚಾರ್ ಇತರರು ಉಪಸ್ಥಿತರಿದ್ದರು.
- ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಸಲಹೆ
ಆಲೂರು : ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಠದಲ್ಲಿ ಯತಿಗಳಿದ್ದು, ಉತ್ತರಾಧಿಕಾರಿಗಳನ್ನು ಮಾಡಿಕೊಳ್ಳುತ್ತಿರುವುದು ದೇಶದಲ್ಲೇ ಪ್ರಥಮ ಎಂದು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠಾಧೀಶ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ವಿಶ್ವಕರ್ಮ ಸಮಾಜ ಮತ್ತು ತಾಲೂಕು ವಿರಾಟ್ ವಿಶ್ವಕರ್ಮ ಯುವಕ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ವಿರಾಟ್ ವಿಶ್ವಕರ್ಮ ಯುವಕ ಸಂಘದ ಪದಗ್ರಹಣ ಸಮಾರಂಭ ಮತ್ತು ಫೆ.26 ರಂದು ಅರೆಮಾದನಹಳ್ಳಿ ಮಹಾಸಂಸ್ಥಾನದಲ್ಲಿ ನಡೆಯುವ ಸನ್ಯಾಸ ದೀಕ್ಷೆ ಮತ್ತು ಶಿಷ್ಯ ಸ್ವೀಕಾರ ಸಮಾರಂಭದ ಪೂರ್ವಬಾವಿ ಸಭೆಯ ಸಾನ್ನಿದ್ಯ ವಹಿಸಿ ಮಾತನಾಡಿದರು.
ಫೆ.26ರಂದು ಮಠದಲ್ಲಿ ಜರುಗಲಿರುವ ಸನ್ಯಾಸ ದೀಕ್ಷೆ ಮತ್ತು ಶಿಷ್ಯ ಸ್ವೀಕಾರ ಮಾಡುತ್ತಿರುವ ವಟು, ಈಗಾಗಲೇ ಮೈಸೂರಿನಲ್ಲಿ ಸಂಸ್ಕೃತ ವೇದಾದ್ಯಯನ ಪಡೆದು, ಇಂಜಿನಿಯರ್ ಪದವೀಧರರಾಗಿದ್ದು, ಋಷಿಕೇಶದಲ್ಲಿ ದಯಾನಂದ ಸರಸ್ವತಿಯವರ ಮಾರ್ಗದರ್ಶನದಲ್ಲಿ ವೇದಾಂತ ಅಧ್ಯಯನ ಮಾಡಿ ನುರಿತವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಸಮಾಜ ಶಕ್ತಿ ತುಂಬಬೇಕು ಎಂದರು.
ಸಮಾಜ ಮತ್ತು ಮಠಗಳಿಗೆ ಅವಿನಾಭಾವ ಸಂಬಂಧವಿದ್ದು ಯುವಶಕ್ತಿ ಇದನ್ನು ಅರಿಯುವುದು ಅತ್ಯಗತ್ಯವಾಗಿದೆ. ಸಂಘಟನೆ ಒಂದು ಕುಟುಂಬದಂತಿರಬೇಕು. ದ್ವೇಷವನ್ನು ಮರೆಯಬೇಕು, ಸ್ನೇಹವನ್ನು ಬೆಳೆಸಬೇಕು. ಯುವಕರು ಮನಸ್ಸು ಮಾಡಿದರೆ ಹಿರಿಯರ ಮಾರ್ಗದರ್ಶನದಲ್ಲಿ ಏನನ್ನಾದರೂ ಸಾಧನೆ ಮಾಡಬಹುದು. ಭಿನ್ನಾಭಿಪ್ರಾಯ ತೊರೆದು ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಪ್ರತಿಯೊಂದು ತಾಲೂಕಿನಲ್ಲಿ ಮಹಿಳಾ ಮಂಡಲಿಗಳು ಪ್ರಾರಂಭವಾಗುವ ಮೂಲಕ ಮಠದ ಸಂಪರ್ಕವಿಟ್ಟುಕೊಂಡು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸಬೇಕು ಎಂದರು.
ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ವಿ. ಹರೀಶ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಮಾಜಿ ಅಧ್ಯಕ್ಷ ಬಿ. ಸಿ. ಶಂಕರಾಚಾರ್ ಮಾತನಾಡಿದರು.
ವಿರಾಟ್ ವಿಶ್ವಕರ್ಮ ಯುವಕ ಸಂಘದ ನೋಂದಣಿ ಪತ್ರವನ್ನು ಅನಾವರಣಗೊಳಿಸಲಾಯಿತು. ಸಂಘದ ಪದಾಧಿಕಾರಿಗಳು ಮತ್ತು ನಿರ್ದೇಶಕರಿಗೆ ಸ್ವಾಮೀಜಿ ಪದಗ್ರಹಣ ಬೋಧಿಸಿದರು.
ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂ.ಪಿ.ಹರೀಶ್, ವಿರಾಟ್ ವಿಶ್ವಕರ್ಮ ಯುವಕ ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ, ಉಪಾಧ್ಯಕ್ಷ ಎಂ. ಡಿ. ಪ್ರದೀಪ್, ಬಿ.ವೈ.ಮಧುಕುಮಾರ್, ವಿಶ್ವನಾಥ್, ಎಂ.ಡಿ.ಪ್ರತಾಪ್, ಪವನ್, ಎಂ. ಯು. ಮಿಥುನ್, ಮಲ್ಲೇಶಚಾರ್, ಕೆ.ಎಚ್.ಹೂವಣ್ಣಚಾರ್ ಕಂದಾವರ, ಚಂದ್ರಶೇಖರ್, ಪ್ರಭಾಕರ್, ವೇದಾಂತಚಾರ್, ಬಸವಾಚಾರ್, ಜಗದೀಶಚಾರ್, ರಂಗಾಚಾರ್, ಶಿಲ್ಪಾ ಉಪಸ್ಥಿತರಿದ್ದರು.