ಸಕಲೇಶಪುರ ತಾಲೂಕು ಮೂರ್ಕಣ್ಣು ಗುಡ್ಡ ಪ್ರದೇಶವನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಪಡೆಯುವ ಪ್ರಸ್ತಾವವನ್ನು ಖಂಡಿಸಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಎಚ್.ಎಂ.ವಿಶ್ವನಾಥ್, ಎಚ್.ಕೆ. ಕುಮಾರಸ್ವಾಮಿ, ಅಚ್ಚನಹಳ್ಳಿ, ಅಗನಿ, ಕಾಡುಮನೆ ಸೇರಿದಂತೆ ಸುತ್ತಮುತ್ತಲ 8 ಗ್ರಾಮಗಳ ಗ್ರಅಮಸ್ಥರು ಇದ್ದರು. 
ಹಾಸನ

ಮೂರ್ಕಣ್ಣು ಗುಡ್ಡವನ್ನು ಪ್ರಸ್ತಾವನೆಯಿಂದ ಕೈಬಿಡಿ

ಪ್ರಮುಖ ಮುಖ್ಯಾಂಶಗಳು

  • ಮೂರ್ಕಣ್ಣು ಗುಡ್ಡವನ್ನು ಪ್ರಸ್ತಾವನೆಯಿಂದ ಕೈಬಿಡಿ
  • ಮಾಜಿ ಶಾಸಕರಾದ ವಿಶ್ವನಾಥ, ಕುಮಾರಸ್ವಾಮಿ ನೇತೃತ್ವದಲ್ಲಿ ಹೋರಾಟ
  • ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಎಂಟು ಗ್ರಾಮಗಳ ಜನತೆ
ಹಾಸನ: ಸಕಲೇಶಪುರ ತಾಲೂಕು ಮೂರ್ಕಣ್ಣು ಗುಡ್ಡ ಪ್ರದೇಶವನ್ನು ಶತಮಾನದ ಹಿಂದೆಯೇ ಕಾಯ್ದಿರಿಸಿದ ಅರಣ್ಯ ಪ್ರದೇಶ ಪ್ರಸ್ತಾವನೆಯಿಂದ ಕೈಬಿಡಲಾಗಿದೆ. ಇದೀಗ 2025ರಲ್ಲಿ ಮತ್ತೆ ಪ್ರಸ್ತಾವನೆ ಜಾರಿಗೊಳಿಸಲು ಅರಣ್ಯ ಇಲಾಖೆ ಮುಂದಾಗಿರುವುದು ಖಂಡನೀಯ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮತ್ತು ಎಚ್.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ಅಚ್ಚನಹಳ್ಳಿ, ಅಗನಿ, ಕಾಡುಮನೆ ಸೇರಿದಂತೆ ಸುತ್ತಮುತ್ತಲ 8 ಗ್ರಾಮಗಳ ಸುಮಾರು 300ಕ್ಕೂ ಹೆಚ್ಚು ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಎಚ್.ಎಂ.ವಿಶ್ವನಾಥ್, 1920ರಲ್ಲಿ ಮೈಸೂರು ಅರಣ್ಯ ನಿಯಂತ್ರಣ ಕಾಯ್ದೆ ಸೆಕ್ಷನ್ 4ರ ಅಡಿಯಲ್ಲಿ ಮೂರ್ಕಣ್ಣು ಗುಡ್ಡ ಅರಣ್ಯ ಬ್ಲಾಕ್‌ನ್ನು ಕಾಯ್ದಿರಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಂದ ಗ್ರಾಮಸ್ಥರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂಬ ಕಾರಣದಿಂದ ಮೈಸೂರು ಸರ್ಕಾರ 1924ರ ಜನವರಿಯಲ್ಲಿ ಈ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿತ್ತು.
ಸರ್ಕಾರದಿಂದಲೇ ರದ್ದುಗೊಳಿಸಲಾದ ಈ ಪ್ರಸ್ತಾವನೆಯನ್ನು 100 ವರ್ಷಗಳ ನಂತರ, ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 17ರ ಅಡಿಯಲ್ಲಿ ಮತ್ತೆ ಜಾರಿಗೊಳಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿರುವುದು ಸರಿಯಲ್ಲ. ಇದು ಕಂದಾಯ ಭೂಮಿಯೆಂದು ನಂಬಿ ಗ್ರಾಮಸ್ಥರು ಕೃಷಿ ಚಟುವಟಿಕೆ, ಮನೆ ನಿರ್ಮಾಣ ಹಾಗೂ ಮೂಲ ಸೌಕರ್ಯಗಳೊಂದಿಗೆ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ತಕ್ಷಣ ಸರ್ಕಾರ ಈ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಅರಣ್ಯ ಇಲಾಖೆಯ ನೋಟಿಸ್ ಪ್ರಶ್ನಿಸಿ ಗ್ರಾಮಸ್ಥರು ಹೈಕೋರ್ಟ್ ಮೊರೆ ಹೋಗಿದ್ದಾರೆ. ವಿಚಾರಣೆ ಸಂದರ್ಭದಲ್ಲಿ, ಸಂಬಂಧಿತ ಪ್ರದೇಶವು ಐತಿಹಾಸಿಕವಾಗಿ ಕಂದಾಯ ಭೂಮಿಯಾಗಿದ್ದು, ಅರಣ್ಯ ಭೂಮಿಯಲ್ಲ ಎಂಬ ಅಭಿಪ್ರಾಯವನ್ನು ಕೋರ್ಟ್ ವ್ಯಕ್ತಪಡಿಸಿದೆ. ಹೀಗಾಗಿ ಕೂಡಲೇ ಈ ಬಗೆಗಿನ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಕೈಬಿಡಬೇಕು. ಈ ವಿಚಾರವಾಗಿ ಮುಖ್ಯಮಂತ್ರಿಗಳು, ಅರಣ್ಯ, ಕಂದಾಯ ಸಚಿವರನ್ನು ಭೇಟಿಯಾಗಿ ಅವರಿಗೆ ಗ್ರಾಮಸ್ಥರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಬೆಳೆಗಾರರ ಸಂಘದ ಉಪಾಧ್ಯಕ್ಷ ಹಾನ್ ಬಾಳ್ ಭಾಸ್ಕರ್, ಚಂದ್ರೇಗೌಡ, ರಾಜು ಎಟಿಎಂ, ಹರೀಶ್ ಹಾನ್ಬಾಳ್, ಎಚ್.ಪಿ. ಮೋಹನ್, ಅನಿಲ್, ಮಂಜುನಾಥ್, ನಿವೃತ್ತ ತಹಸೀಲ್ದಾರ್ ಅಣ್ಣೇಗೌಡ, ವಿಕ್ರಂ ತೋಟದಗದ್ದೆ ಇತರರು ಇದ್ದರು.