ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಕಲೇಶಪುರ ಉಪ ವಿಭಾಗಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಲ್ಯಾಪ್‌ಟಾಪ್ ವಿತರಿಸಿದರು.
ಬೇಲೂರು: ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅರ್ಜಿಗಳು ವಿಳಂಬವಾಗದೆ ವಿಲೇವಾರಿಯಾಗಬೇಕೆಂಬ ನಿಟ್ಟಿನಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೆಲಸ ಮತ್ತಷ್ಟು ಸುಗಮವಾಗಲಿದೆ ಎಂದು ಸಕಲೇಶಪುರ ಉಪ ವಿಭಾಗಾಧಿಕಾರಿ ಮಂಜುನಾಥ್ ಹೇಳಿದರು.
ತಾಲೂಕು ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಇತ್ತೀಚೆಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಯಾವುದೇ ರೀತಿಯಲ್ಲೂ ವಿಳಂಬವಾಗದೆ ತ್ವರಿತವಾಗಿ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕೆಂದು ಲ್ಯಾಪ್‌ಟಾಪ್‌ಗಳನ್ನು ಸರ್ಕಾರ ನೀಡುತ್ತಿದೆ. ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ. ವಿಶೇಷವಾಗಿ ಗ್ರಾಮಲೆಕ್ಕಾಧಿಕಾರಿಗಳು ಯಾವುದೇ ಸಬೂಬು ಹೇಳದೆ ಕೆಲಸ ಮಾಡಬೇಕು. ಲ್ಯಾಪ್‌ಟಾಪ್‌ಗಳು ಡಿಜಿಟಲೀಕರಣ ಗೊಂಡಿರುವುದರಿಂದ ಸೇವೆಗಳು ಪಾರದರ್ಶಕವಾಗಿ ಒದಗಿಸಲು ಕಂದಾಯ ಇಲಾಖೆ ದಿಟ್ಟ ಕ್ರಮವನ್ನು ಕೈಗೊಂಡಿದೆ. ಪ್ರತಿನಿತ್ಯ ಅರ್ಜಿಗಳ ವಿಲೇವಾರಿ ಮತ್ತು ಸೇವೆಗಳ ಅಂಕಿ ಅಂಶಗಳನ್ನು ತಿಳಿಯಲು ಇದು ಸಹಕಾರಿಯಾಗಿದೆ. ಜನರಿಗೆ ಉತ್ತಮ ಕೆಲಸ ಮಾಡಿ ಕೊಡಲು ಮುಂದಾಗಬೇಕು ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಇತ್ತೀಚಿನ ದಿನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಅವಿರತ ಶ್ರಮದಿಂದ ಪಾರದರ್ಶಕವಾಗಿ ಆಡಳಿತ ಸೇವೆಗಳನ್ನು ತ್ವರಿತವಾಗಿ ನೀಡಲು ಲ್ಯಾಪ್‌ಟಾಪ್ ಸಹಕಾರಿಯಾಗಿದೆ. ಕಂದಾಯ ಇಲಾಖೆ ಆಸ್ತಿ, ಭೂದಾಖಲೆಗಳ ನಿರ್ವಹಣೆ ಸಂಬಂಧಿಸಿದ ಸಾರ್ವಜನಿಕರ ಸೇವೆಗಳನ್ನು ಪಾರದರ್ಶಕವಾಗಿ ನೀಡುವುದು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮಗಳಲ್ಲಿ ಕುಳಿತು ಆನ್‌ಲೈನ್ ಮೂಲಕ ದಾಖಲೆಗಳ ಸಮೀಕರಣ ಮತ್ತು ಪರಿಶೀಲನೆಗೆ ಇದು ಪೂರಕವಾಗಲಿದೆ ಎಂದರು.
ಶಿರಸ್ತೇದಾರ್ ರಂಗಸ್ವಾಮಿ, ಆರ್‌ಐ ಪ್ರಕಾಶ್, ಯೋಗೀಶ್ ಇತರರಿದ್ದರು.