ಅರಕಲಗೂಡಿನಲ್ಲಿ ಮಂಗಳವಾರ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ರಥೋತ್ಸವದಲ್ಲಿ ಭಕ್ತರು ತೇರು ಎಳೆದು ಸಂಭ್ರಮಿಸಿದರು.
ಅರಕಲಗೂಡು: ಪಟ್ಟಣದ ಕೋಟೆ ಐತಿಹಾಸಿಕ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವ ಮಂಗಳವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಕೆಲ ದಿನಗಳಿಂದ ವಿವಿಧ ಪೂಜಾ ವಿಧಾನಗಳು ನಡೆದವು. ಬೆಳಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಹಾಗೂ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಪೂಜೆ ಸಲ್ಲಿಸಿದ ಬಳಿಕ ಕೃಷ್ಣಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ಬಂದ ದೇವರ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಯಿತು.
ಶಾಸಕ ಎ. ಮಂಜು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ರಥ ಬೀದಿಯಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು. ರಥ ಸ್ವಸ್ಥಾನ ಸೇರಿದ ಬಳಿಕ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು. ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಬೆಳಗ್ಗೆ 7.30ರಿಂದಲೇ ಪೂಜಾ ಕಾರ್ಯಗಳನ್ನು ನಡೆಸಿ 10.30ಕ್ಕೆ ರಥೋತ್ಸವ ಸಂಪನ್ನಗೊಳಿಸಲಾಯಿತು.
ಮಧ್ಯಾಹ್ನ 12ರವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿ ಬಳಿಕ ದೇವಾಲಯದ ಬಾಗಿಲು ಮುಚ್ಚಲಾಯಿತು. ಮುಖಂಡರಾದ ನರಸೇಗೌಡ, ಹೂವಣ್ಣ, ರಮೇಶ್ ವಾಟಾಳ್, ಎ.ಎಸ್.ಹಿರಣ್ಣಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜ್, ಕಂದಾಯ ನೀರೀಕ್ಷಕ ಕೆ.ಎಸ್.ಲೋಕೇಶ್, ಪಪಂ ಮುಖ್ಯಾಧಿಕಾರಿ ನಾಗೇಂದ್ರಕುಮಾರ್, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಚ್.ಆರ್.ನರಸಿಂಹಮೂರ್ತಿ, ಕಾರ್ಯದರ್ಶಿ ಜಿ.ರಮೇಶ್ ಉಪಸ್ಥಿತರಿದ್ದರು.