ಸಕಲೇಶಪುರ ತಾಲೂಕಿನ ಪಟ್ಲಬೆಟ್ಟಕ್ಕೆ ಪ್ರವಾಸಿಗರು ನಡೆದುಕೊಂಡು ತೆರಳುತ್ತಿರುವುದು. 
ಹಾಸನ

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಿಗದ ಉತ್ತೇಜನ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಿಗದ ಉತ್ತೇಜನ
  • ಸೌಲಭ್ಯ ಕಲ್ಪಿಸದ ಹಿನ್ನೆಲೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ
  • ಇಲಾಖೆಯ ನಿರ್ಲಕ್ಷೃ
ಕೆ.ಆರ್.ಪ್ರಸಿನ್ ಹಾಸನ
ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜನಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಕೇವಲ ಕಾಗದದಲ್ಲೇ ಉಳಿದಿರುವ ಪರಿಣಾಮ ಪ್ರವಾಸಿಗರು ಹಾಗೂ ಸ್ಥಳೀಯರು ತೀವ್ರ ನಿರಾಸೆ ಅನುಭವಿಸುವಂತಾಗಿದೆ.
ಮಳೆಗಾಲ ಆರಂಭವಾಗಿರುವ ಹಿನ್ನಲೆಯಲ್ಲಿ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟಗಳ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ ಚಾರಣಕ್ಕೆ ಬರುವವರಿಗೆ ಎಲ್ಲಿಯೂ ಮುಕ್ತ ಅವಕಾಶ ಕಲ್ಪಿಸಿಲ್ಲ. ಪಟ್ಲ ಬೆಟ್ಟ, ಗವಿ ಬೆಟ್ಟ, ಹೊಸಳ್ಳಿ ಬೆಟ್ಟ, ಮೂರ್ಕಣ್ಣು ಗುಡ್ಡ ಸೇರಿ ಎಲ್ಲ ಪ್ರೇಕ್ಷಣೀಯ ಸ್ಥಳಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಚಾರಣ ಸ್ಥಳಗಳಲ್ಲಿ ಆನ್‌ಲೈನ್ ಟಿಕೆಟ್ ವ್ಯವಸ್ಥೆ, ಅರಣ್ಯ ಹಾಗೂ ಕಂದಾಯ ಇಲಾಖೆಯಿಂದಲೇ ವಾಹನ ವ್ಯವಸ್ಥೆ ಮಾಡುವ ಭರವಸೆಯನ್ನು ಜಿಲ್ಲಾಡಳಿತ ನೀಡಿತ್ತು. ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸಭೆಗಳನ್ನು ನಡೆಸಿದ್ದರು. ಆದರೆ ಯಾವುದೂ ಕಾರ್ಯರೂಪಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯ ಇಳಿಕೆಯಾಗಿದೆ. ನಾಲ್ಕೈದು ಕಿ.ಮೀ. ಕಾಲ್ನಡಿಗೆಯಲ್ಲಿ ಹೋಗಲು ಆಗದ ಪ್ರವಾಸಿಗರು ಸುಂದರ ತಾಣಗಳನ್ನು ನೋಡುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಇದು ಸ್ಥಳೀಯ ಪ್ರವಾಸೋದ್ಯಮ ಬೆಳವಣಿಗೆ ಮೇಲೆ ಭಾರಿ ಪರಿಣಾಮ ಬೀರಿದೆ. ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ಹಿನ್ನೆಲೆಯಲ್ಲಿ ಮಂಜ್ರಾಬಾದ್ ಕೋಟೆ ವೀಕ್ಷಣೆಗೂ ಜನರ ಸಂಖ್ಯೆ ಕಡಿಮೆಯಾಗಿದೆ.
ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ಕುಸಿತ:
ಸೌಂದರ್ಯದ ಕಣಜ ಎಂದೇ ಖ್ಯಾತಿ ಪಡೆದಿರುವ ಪಟ್ಲ ಬೆಟ್ಟಕ್ಕೆ ಪ್ರತಿವರ್ಷ ಇಷ್ಟೊತ್ತಿಗೆ ಪ್ರವಾಸಿಗರು ವಿಪರೀತ ಸಂಖ್ಯೆಯಲ್ಲಿ ಬರುತ್ತಿದ್ದರು. ಚಲಿಸುವ ಮೋಡಗಳು, ಆಹ್ಲಾದಕರ ಗಾಳಿ, ದೂರದಿಂದ ನುಣ್ಣಗೆ ಕಾಣಿಸುವ ಜಲಪಾತ, ಹಸಿರು ಪ್ರದೇಶ ನೋಡುವುದೇ ಕಣ್ಣಿಗೆ ಹಬ್ಬ. ಮಳೆಗಾಲಕ್ಕೆ ತಮಿಳುನಾಡಿನ ಊಟಿ ಅನುಭವ ನೀಡುವ ಪಟ್ಲ ಬೆಟ್ಟ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಹಾಸನ ಮಾತ್ರವಲ್ಲದೆ ಬೆಂಗಳೂರು, ಮಂಗಳೂರು ಸೇರಿ ವಿವಿಧ ಜಿಲ್ಲೆಯಿಂದ ಸಾರ್ವಜನಿಕರು ಅಲ್ಲಿಗೆ ಬರುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಅಲ್ಲಿ ವಾಹನ ಓಡಾಟ ನಿಷೇಧಿಸಲಾಗಿದೆ. ಬೈಕ್‌ಗಳು ತೆರಳದಂತೆ ಗೇಟ್ ಹಾಕಿ ಸುತ್ತಲೂ ತಂತಿ ಬೇಲಿ ಹಾಕಿರುವುದರಿಂದ ಹೋಗುವುದು ಅಸಾಧ್ಯವಾಗಿದೆ. ಜತೆಗೆ ಸೂಕ್ತ ರಕ್ಷಣೆಯೂ ಇಲ್ಲದಿರುವುದರಿಂದ ಪ್ರವಾಸಿಗರು ಪಟ್ಲ ಬೆಟ್ಟದತ್ತ ಬರುತ್ತಿಲ್ಲ. ಪ್ರವಾಸಿಗರನ್ನೇ ನಂಬಿಕೊಂಡಿದ್ದ ಸ್ಥಳೀಯ ವ್ಯಾಪಾರಿಗಳು ಸಹ ಈ ಬಾರಿ ನಷ್ಟ ಅನುಭವಿಸುವಂತಾಗಿದೆ.
ಬೆಟ್ಟದ ಭೈರವೇಶ್ವರದಲ್ಲೂ ಅದೇ ಸ್ಥಿತಿ:
ಐತಿಹಾಸಿಕ ಬೆಟ್ಟದ ಭೈರವೇಶ್ವರ ದೇವಸ್ಥಾನ ಮಳೆಗಾಲದಲ್ಲಿ ಜನರಿಂದ ತುಂಬಿ ತುಳುಕುತ್ತಿದ್ದ ಪ್ರದೇಶ. ಆದರೆ ಕೆಲ ತಿಂಗಳ ಹಿಂದೆ ಛಾಯಾಗ್ರಾಹಕರು ಹಾಗು ಸ್ಥಳೀಯರ ನಡುವೆ ಗಲಾಟೆ ನಡೆದ ಬಳಿಕ ಅಲ್ಲಿಗೆ ಜನರ ಬರುವಿಕೆ ತೀರಾ ಕಡಿಮೆಯಾಗಿದೆ. ಫೋಟೋ ಕ್ಲಿಕ್ಕಿಸಿಕೊಂಡರೆ ಜಗಳ ಮಾಡುತ್ತಾರೆಂಬ ಭಯ ಜನರಲ್ಲಿ ಮೂಡಿದೆ. ಜತೆಗೆ ಫೋಟೋ ಶೂಟ್‌ಗೆ ಜಿಲ್ಲಾಡಳಿತ ಶುಲ್ಕ ನಿಗದಿಪಡಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾಡಳಿತ ನಿರ್ಲಕ್ಷೃಕ್ಕೆ ಸ್ಥಳೀಯರು ಹೈರಾಣ
ಪಶ್ಚಿಮಘಟ್ಟದ ಸಾಲು ಹೊತ್ತಿರುವ ಸಕಲೇಶಪುರ ಪ್ರವಾಸೋದ್ಯಮಕ್ಕೆ ಹೆಸರಾದ ಊರು. ಕಾಡಾನೆ ಹಾವಳಿ ಹಾಗೂ ನಿರಂತರ ಮಳೆಯಿಂದ ಜನರ ಆದಾಯವು ಅಷ್ಟಕ್ಕಷ್ಟೇ ಎಂಬಂತಾಗಿದೆ. ಇನ್ನು ಪ್ರವಾಸಿ ತಾಣಗಳ ಸುತ್ತಲಿನ ಜನರು ವ್ಯಾಪಾರ ವಹಿವಾಟು ನಂಬಿ ಬದುಕುತ್ತಿದ್ದಾರೆ. ಆದರೆ ಪ್ರೇಕ್ಷಣೀಯ ಸ್ಥಳಗಳಲ್ಲಿ ಜಿಲ್ಲಾಡಳಿತ ನಿಷೇಧ ಹೇರಿರುವುದರಿಂದ ಭಾರಿ ಸಮಸ್ಯೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರವಾಸಿತಾಣಗಳು, ಟ್ರಕ್ಕಿಂಗ್ ಸ್ಥಳಗಳಿಗೆ ಪ್ರವಾಸಿಗರಿಗೆ ವಾಹನಗಳ ಹಾಗೂ ಪ್ರವಾಸಿಗರ ನಿಬರ್ಂಧ ಹಾಗೂ ಆನ್ ಲೈನ್ ಬುಕ್ಕಿಂಗ್ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ಸರ್ಕಾರದೊಂದಿಗೆ ಚರ್ಚಿಸಿ ಪ್ರವಾಸಿಗರು ಹಾಗೂ ಸ್ಥಳೀಯರ ಹಿತದೃಷ್ಟಿಯಿಂದ ಕ್ರಮವಹಿಸಲಾಗುವುದು.
ಸಿಮೆಂಟ್ ಮಂಜು
ಸಕಲೇಶಪುರ ಶಾಸಕ
ಸಕಲೇಶಪುರ ತಾಲೂಕಿನ ಕೂಡುರಸ್ತೆ ಬಳಿ ಇರುವ ಪಟ್ಲ ಬೆಟ್ಟ ಉತ್ತಮ ಅನುಭವ ನೀಡುತ್ತದೆ. ಇಲ್ಲಿ ಸಾಕಷ್ಟು ಜನರು ಬಂದು ಪ್ರಕೃತಿ ಸೌಂದರ್ಯವನ್ನು ಅನುಭವಿಸುತ್ತಿದ್ದಾರೆ. ವಾಹನ ವ್ಯವಸ್ಥೆ ಇದ್ದರೆ ವಯಸ್ಕರು ಕೂಡ ಇಲ್ಲಿಗೆ ಬಂದು ಪ್ರಕೃತಿ ಸೌಂದರ್ಯವನ್ನು ಅನುಭವಿಸಬಹುದು.
ಸಾಯಿ ಚರಣ್
ಪ್ರವಾಸಿ, ಹೈದರಬಾದ್
ಪಟ್ಲಬೆಟ್ಟದಲ್ಲಿ 360 ವೀವ್ ನೇಚರ್ ಕಾಣುತ್ತದೆ. ಪರಿಸರ ಸುಂದರವಾಗಿದೆ. ಬೆಟ್ಟಕ್ಕೆ ತೆರಳಲು ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ನಡೆಯಲು ಸಾಧ್ಯವಿಲ್ಲದ ಸಾಕಷ್ಟು ಪ್ರವಾಸಿಗರು ವಾಪಸ್ ತೆರಳುತ್ತಿದ್ದಾರೆ. ವಾಹನ ವ್ಯವಸ್ಥೆ ಕಲ್ಪಿಸಿದರೆ ಸ್ಥಳೀಯರಿಗೆ ಉದ್ಯೋಗ ದೊರಕುವುದಲ್ಲದೆ, ಪ್ರವಾಸಿಗರಿಗೂ ಅನುಕೂಲವಾಗುತ್ತದೆ.
ಶಿವಕುಮಾರ್
ಹಾನುಬಾಳು ಜೀಪು ಚಾಲಕ