ಚುನಾವಣೆ ಹಿನ್ನೆಲೆಯಲ್ಲಿ ಬೇಲೂರು ತಾಲೂಕಿನ ಅರೇಹಳ್ಳಿ ಭಾಗದಲ್ಲಿ ಬೀಡು ಬಿಟ್ಟಿದ್ದ ಕಾರ್ಮಿಕರು ತಮ್ಮೂರಿನತ್ತ ತೆರಳಲು ಅರೇಹಳ್ಳಿ ಬಸ್ ನಿಲ್ದಾಣಕ್ಕೆ ತೆರಳುತ್ತಿರುವುದು. 
ಹಾಸನ

ತವರಿನತ್ತ ಹೊರಟ ಹೊರ ರಾಜ್ಯ ಕಾರ್ಮಿಕರು

ಲಲಾಟಾಕ್ಷ ಎಸ್
ಬೇಲೂರು: ಅಸ್ಸಾಂ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಅರೇಹಳ್ಳಿ ಹಾಗೂ ಸುತ್ತಲ ಗ್ರಾಮಗಳಲ್ಲಿ ನೆಲೆಸಿದ್ದ ಸಾವಿರಾರು ಕಾರ್ಮಿಕರು ತವರಿನತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಇದರಿಂದಾಗಿ ಕೆಲಸಕ್ಕೆ ಕಾರ್ಮಿಕರಿಲ್ಲದೆ ಪರದಾಡುವಂತಾಗಿದೆ.
ಅರೇಹಳ್ಳಿ ಹಾಗೂ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟು, ಕಟ್ಟಡ ನಿರ್ಮಾಣ ಹಾಗೂ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರು ಕಳೆದ ಒಂದೆರಡು ವಾರದಿಂದ ಗಂಟು ಮೂಟೆ ಕಟ್ಟಿಕೊಂಡು ತಮ್ಮೂರಿನತ್ತ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿ ಅರೇಹಳ್ಳಿ ಭಾಗದಲ್ಲಿ ಕಂಡು ಬರುತ್ತಿದೆ. ಅರೇಹಳ್ಳಿ ಪಟ್ಟಣದಲ್ಲಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಮತ್ತು ರಸ್ತೆಯ ಅಕ್ಕಪಕ್ಕದಲ್ಲಿ ಕಾಣ ಸಿಗುತ್ತಿದ್ದ ವಲಸಿಗ ಕಾರ್ಮಿಕರು ಇದೀಗ ಕೆಲ ದಿನಗಳಿಂದ ಕಾಣಸಿಗುತ್ತಿಲ್ಲ. ಇದರಿಂದ ಸಂತೆ ವ್ಯಾಪಾರ, ದಿನಸಿ, ಹಾರ್ಡ್‌ವೇರ್, ಬೇಕರಿ ಸೇರಿದಂತೆ ಇತರೆ ವ್ಯಾಪಾರ ವಹಿವಾಟು ಕಡಿಮೆಯಾಗಿದೆ.
ವಲಸಿಗ ಕಾರ್ಮಿಕರು ನಿತ್ಯ ಅಗತ್ಯ ವಸ್ತುಗಳನ್ನು ಕೊಳ್ಳಲು ಪಟ್ಟಣಕ್ಕೆ ಬರುತ್ತಿದ್ದರು. ಸ್ಥಳೀಯ ವರ್ತಕರಿಗೂ ವ್ಯಾಪಾರವಾಗುತ್ತಿತ್ತು. ಚುನಾವಣೆಗೆ ಮತ ಚಲಾಯಿಸುವ ಉದ್ದೇಶದಿಂದ ಕುಟುಂಬ ಸಮೇತ ತಮ್ಮ ತಮ್ಮ ರಾಜ್ಯಗಳಿಗೆ ತೆರಳುತ್ತಿರುವುದರಿಂದ ಕಟ್ಟಡ ಕಾರ್ಮಿಕರು, ತೋಟದ ಕೂಲಿ ಕೆಲಸಗಾರರಿಗೆ ಮುಂಗಡ ಹಣ ಕೊಟ್ಟಿರುವವರು ಪರದಾಡುವಂತಾಗಿದೆ. ಕೆಲಸಕ್ಕೆ ಕಾರ್ಮಿಕರಿಲ್ಲದೆ ಪರ್ಯಾಯ ವ್ಯವಸ್ಥೆಗೆ ಕಟ್ಟಡ ಗುತ್ತಿಗೆದಾರರು ಮತ್ತು ತೋಟಗಳ ಮಾಲೀಕರು ಮುಂದಾಗಬೇಕಾದ ಅನಿವಾರ್ಯತೆ ಒದಗಿದೆ.
"

ಮೂರ‌್ನಾಲ್ಕು ವರ್ಷಗಳಿಂದ ತೋಟದ ಕಾಫಿ ಹಣ್ಣು ಕೊಯ್ಲಿನಿಂದ ಹಿಡಿದು ಮರಗಸಿ, ಸ್ಪಿಂಕ್ಲರ್, ಔಷಧ ಸಿಂಪಡಣೆ, ಗೊಬ್ಬರ ಹಾಕುವುದು, ಗಿಡಕಸಿ ಸೇರಿದಂತೆ ಇತರೆ ಎಲ್ಲ ತೋಟ, ಗದ್ದೆಗಳ ಕೆಲಸ ಕಾರ್ಯಗಳು ಕಾರ್ಮಿಕರ ಕೊರತೆ ಇಲ್ಲದೆ ಉತ್ತಮವಾಗಿ ನಡೆಯುತ್ತಿತ್ತು. ಆದರೀಗ ಅಸ್ಸಾಂ ರಾಜ್ಯದ ವಲಸಿಗ ಕಾರ್ಮಿಕರು ಚುನಾವಣೆ ಹಿನ್ನೆಲೆಯಲ್ಲಿ ತಮ್ಮೂರಿಗೆ ತೆರಳುತ್ತಿರುವುದರಿಂದ ಸಕಾಲದಲ್ಲಿ ಆಗಬೇಕಾದ ಕೆಲಸಗಳು ವಿಳಂಬವಾಗುತ್ತಿದೆ. ಹೊರ ರಾಜ್ಯಗಳ ಕಾರ್ಮಿಕರು ಬರುವವರೆಗೂ ಕಾಯಬೇಕಿದೆ. ಶಾರಿಬ್ ಫರ್ಹಾನ್, ಅಧ್ಯಕ್ಷ, ಅರೇಹಳ್ಳಿ ಕಾಫಿ ಬೆಳೆಗಾರರ ಸಂಘ