ಟಿಂಬರ್ ಕಾರ್ಮಿಕರ ಸಂಘದ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆಯ ಪೋಸ್ಟರ್ ಬಿಡುಗಡೆ
- ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಹರೀಶ್ ಮಾಹಿತಿ
ಸಕಲೇಶಪುರ: ಟಿಂಬರ್ ಕಾರ್ಮಿಕರ ಸಂಘ ಹಾಗೂ ಅಸಂಘಟಿತ ಕಾರ್ಮಿಕರು ಹಾಗೂ ತಾಲೂಕಿನ ಎಲ್ಲ ಕಾರ್ಮಿಕರ ಸಹಯೋಗದಲ್ಲಿ ಮೇ.1ರಂದು ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಹರೀಶ್ ಹೇಳಿದರು.
ಪಟ್ಟಣದಲ್ಲಿ ಟಿಂಬರ್ ಕಾರ್ಮಿಕರ ಸಂಘದ ಕಚೇರಿಯಲ್ಲಿ ಶುಕ್ರವಾರ ಮೇ.1ರಂದು ನಡೆಯಲಿರುವ ಕಾರ್ಮಿಕ ದಿನಾಚರಣೆಯ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದರು.
ಟಿಂಬರ್ ಕಾರ್ಮಿಕರ ಬದುಕು ಅತ್ಯಂತ ಕಷ್ಟಕರವಾಗಿದ್ದು, ಕೆಲಸ ಮಾಡುವಾಗ ಯಾವುದೇ ಸಂದರ್ಭದಲ್ಲಿ ಅಪಘಾತಗಳು ಉಂಟಾಗುವ ಸಾಧ್ಯತೆ ಇದೆ. ಅಪ್ಪಿತಪ್ಪಿ ಅಪಘಾತವಾದರೆ ಕಾರ್ಮಿಕನ ಆಸ್ಪತ್ರೆ ಖರ್ಚು ನಿಭಾಯಿಸುವುದು ಯಾರು? ಕುಟುಂಬದ ನಿರ್ವಹಣೆ ಮಾಡುವವರು ಯಾರು? ಹೀಗಾಗಿ ಸರ್ಕಾರ ಕಾರ್ಮಿಕರಿಗೆ ಸರಿಯಾದ ಸೌಲಭ್ಯ ಒದಗಿಸಬೇಕು. ತಮ್ಮ ಹಕ್ಕುಗಳಿಗಾಗಿ ಟಿಂಬರ್ ಕಾರ್ಮಿಕರು ಸಂಘಟಿತರಾಗಬೇಕಿದೆ. ಈ ಹಿನ್ನೆಲೆಯಲ್ಲಿ ಮೇ.1ರಂದು ಪಟ್ಟಣದ ಪುರಭವನದಲ್ಲಿ ಟಿಂಬರ್ ಕಾರ್ಮಿಕರ ಸಂಘ, ಅಸಂಘಟಿತ ಕಾರ್ಮಿಕರು ಹಾಗೂ ಇತರ ಕಾರ್ಮಿಕ ಸಂಘಗಳು, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದರು.
ಅಂದು ಬೆಳಗ್ಗೆ 8:30ಕ್ಕೆ ಪಟ್ಟಣದ ತೇಜಸ್ವಿ ಸರ್ಕಲ್‌ನಿಂದ ರ‌್ಯಾಲಿ ಮುಖಾಂತರ ಹಳೆ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಹಾಡ್ಯ ಸುಬ್ಬೇಗೌಡ ಪುರಭವನಕ್ಕೆ ತೆರಳಲಾಗುತ್ತದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಅವರು ಮಾಡಲಿದ್ದು, ಟಿಂಬರ್ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶಹಜಾನ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಎಚ್.ಎಂ.ವಿಶ್ವನಾಥ್, ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್, ಬೈರಮುಡಿ ಚಂದ್ರು, ಸೈಯದ್ ಮುಫೀಜ್, ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಎಂ.ಸಿ ಡೋಂಗ್ರೆ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಟಿಂಬರ್ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷರಾದ ಶಹಜಾನ್ ಮಾತನಾಡಿ, ಟೆಂಬರ್ ಕೆಲಸ ಅತ್ಯಂತ ಕಷ್ಟಕರವಾಗಿದ್ದು, ಹಲವಾರು ಟಿಂಬರ್ ಕಾರ್ಮಿಕರು ಸಾವನ್ನಪ್ಪಿರುವುದು ನಾವು ನೋಡಿದ್ದೇವೆ. ಕುಟುಂಬದ ದುಡಿಯುವ ಯಜಮಾನ ಸಾವನ್ನಪ್ಪಿದರೆ ಆ ಕುಟುಂಬದ ಕಥೆ ಏನು? ಕಾರ್ಮಿಕ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಕನಿಷ್ಠ ಹಣ ದೊರಕುವಂತೆ ಸರ್ಕಾರ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕರು ಪ್ರಮುಖವಾಗಿ ವಸತಿ, ಕುಟುಂಬದ ಆರೋಗ್ಯ ಹಾಗೂ ಮಕ್ಕಳ ಶಿಕ್ಷಣ ವಿಷಯಗಳಲ್ಲಿ ಪರದಾಟ ಮಾಡುತ್ತಿದ್ದು, ಈ ಮೂರು ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಲು ಪ್ರಮುಖವಾಗಿ ಮುಂದಾಗಬೇಕು. ಮಲೆನಾಡು ಭಾಗದ ಪ್ಲಾಂಟೇಶನ್ ಹಾಗೂ ಟಿಂಬರ್ ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಮೇ.1ರಂದು ನಮ್ಮ ಸಂಘಟನೆಯ ನೇತೃತ್ವದಲ್ಲಿ ಕಾರ್ಮಿಕ ದಿನಾಚರಣೆ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ಸಂಘಟನೆಯ ಗೌರವಾಧ್ಯಕ್ಷ ದೇವರಾಜ್, ಉಪಾಧ್ಯಕ್ಷ ಸೋಮಶೇಖರ್,ಕಾರ್ಯದರ್ಶಿ ದೇವರಾಜ್, ಖಜಾಂಚಿ ಸತೀಶ್, ನಿರ್ದೇಶಕರಾದ ಸಂತೋಷ, ಇರ್ಫಾನ್, ಚಂದ್ರಶೇಖರ್,ಸದಸ್ಯರಾದ ಅಲೆಕ್ಸ್, ಅಜೀಜ್, ಅಬ್ದುಲ್, ಅಕ್ಬರ್ ಸಿದ್ದಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು