ಚನ್ನರಾಯಪಟ್ಟಣದ ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಎಚ್.ಎಲ್.ಮಲ್ಲೇಶಗೌಡ ಉದ್ಘಾಟಿಸಿದರು ಎಚ್.ಎನ್.ಲೋಕೇಶ್, ಬೊಮ್ಮೇಗೌಡ, ದಯಾನಂದ್ ಶೆಟ್ಟಿಹಳ್ಳಿ, ಬಿ.ಎಲ್.ಅರುಣ್, ಜಬೀವುಲ್ಲಾ ಬೇಗ್, ಹನುಮಂತಪ್ಪ ಇತರರಿದ್ದರು.
- ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣ
- ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕ ಹಾಗೂ ಕಾಲೇಜು
ಚನ್ನರಾಯಪಟ್ಟಣ: ಕನ್ನಡ ಸಾರಸ್ವತ ಲೋಕಕ್ಕೆ ವೈಚಾರಿಕತೆಯ ಬೀಜ ಬಿತ್ತಿದ ಕುವೆಂಪು ಅವರು ಈ ನೆಲದ ಅಚ್ಚರಿಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಹೇಳಿದರು.
ಪಟ್ಟಣದ ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕ ಹಾಗೂ ಕಾಲೇಜು ವತಿಯಿಂದ ಬುಧವಾರ ಆಯೋಜಿಸಿದ್ದ ಕುವೆಂಪು ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ ಅಪಾರ. ಕಾವ್ಯದ ಹೊಸ ರೂಪಗಳನ್ನು ಪರಿಚಯಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಆಧುನಿಕತೆಯನ್ನು ತಂದುಕೊಟ್ಟರು ಎಂದು ಸ್ಮರಿಸಿದರು.
ನವೋದಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಹನುಮಂತಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ರಾಷ್ಟ್ರಕವಿ ಕುವೆಂಪು ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ಸಾಮರಸ್ಯದಿಂದ ಜೀವನ ನಡೆಸಬೇಕೆಂಬ ಸಂದೇಶ ಸಾರಿದ ವಿಶ್ವ ಮಾನವ ಎಂದು ಬಣ್ಣಿಸಿದರು.
ಮಾನವೀಯ ಧರ್ಮ ಮೇಲು ಎಂಬ ಆಶಾಭಾವನೆಯೊಂದಿಗೆ ಕುವೆಂಪು ನೀಡಿದ ವಿಶ್ವಮಾನವ ಸಂದೇಶ ಮನುಕುಲಕ್ಕೆ ಮಾದರಿ. ಅವರು ರಚಿಸಿದ ಸಾಹಿತ್ಯಗಳು ಎಲ್ಲ ವರ್ಗದ ವಯೋಮಾನದವರಿಗೂ ಅನ್ವಯವಾಗುತ್ತದೆ. ವಿದ್ಯಾರ್ಥಿಗಳು ಅವುಗಳನ್ನು ಓದಿ, ಅರ್ಥೈಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿಯಲ್ಲಿ ನೈತಿಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ ಎಂದು ಹೇಳಿದರು.
ವೈದ್ಯ ನರ್ಸಿಂಗ್ ಶಾಲೆ ಪ್ರಾಂಶುಪಾಲ ಬಿ.ಎಲ್.ಅರುಣ್, ಕಸಾಪ ಜಿಲ್ಲಾ ಕಾರ್ಯದರ್ಶಿ ಬೊಮ್ಮೇಗೌಡ, ರಾಜ್ಯ ಮಾರ್ಗದರ್ಶಿ ಸದಸ್ಯರಾದ ಮುಳ್ಳುಕೆರೆ ಪ್ರಕಾಶ್, ಡಾ.ಬಿ.ಆರ್.ಯುವರಾಜ್, ಸಂಘಟನಾ ಕಾರ್ಯದರ್ಶಿ ಜಬೀವುಲ್ಲಾ ಬೇಗ್, ತಾಲೂಕು ಕಾರ್ಯದರ್ಶಿ ಗೋವಿಂದರಾಜು, ಮಹಿಳಾ ಸದಸ್ಯರಾದ ಯಶೋದಾ ಜೈನ್, ಸುಜಾತಾ, ಮಮತಾ ಇತರರಿದ್ದರು.