ಹಾಸನದ ಆದಿಚುಂಚನಗಿರಿ ಮಠದ ನವನಾಥ ಯಾಗ ಮಂಟಪದಲ್ಲಿ ಆಯೋಜಿಸಿದ್ದ 136ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಂಭುನಾಥ ಸ್ವಾಮೀಜಿ, ಡಾ.ಎಚ್.ಎಲ್.ಮಲ್ಲೇಶಗೌಡ, ಚಂದ್ರಶೇಖರ್ ಇತರರಿದ್ದರು.
- ಮಾನವನ ಬದುಕಿಗೆ ಹೊಸ ಬೆಳಕು ನೀಡಿದ ಕುವೆಂಪು
- ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಅಭಿಮತ
ಹಾಸನ: ರಾಷ್ಟ್ರಕವಿ ಕುವೆಂಪು ಅವರು ಮಾನವನ ಬದುಕಿಗೆ ಹೊಸ ಬೆಳಕು ನೀಡಿದ ಮಹಾಚಿಂತಕ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಹೇಳಿದರು.
ನಗರದ ಆದಿಚುಂಚನಗಿರಿ ಮಠದ ನವನಾಥ ಯಾಗ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ 136ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮದಲ್ಲಿ ಕುವೆಂಪು ಸ್ಮರಣೆ ಕುರಿತು ಉಪನ್ಯಾಸ ನೀಡಿದರು.
ಜಗತ್ತಿನ ದುಃಖವನ್ನು ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿದವರು ಕುವೆಂಪು. ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯ ನಮನ್ನು ಸಾಕಷ್ಟು ಚಿಂತನೆಗೆ ದೂಡುತ್ತದೆ ಎಂದರು.
ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬುದೇ ಅವರ ಸಾಹಿತ್ಯದ ತಿರುಳು. ಲೋಕದಿಂದ ನಿಂದನೆಗೆ ಗುರಿಯಾದ ಕೈಕೆಯಿ ಮತ್ತು ಮಂಥರೆಯಂತಹ ಪಾತ್ರಗಳಲ್ಲೂ ಮಾನವೀಯತೆ ಮತ್ತು ಮಮತೆಯನ್ನು ಹುಡುಕಿದ ಕುವೆಂಪು, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮಹತ್ವವೆಂದು ಸಾರಿದ್ದಾರೆ ಎಂದರು.
136 ಕಾರ್ಯಕ್ರಮಗಳು ವ್ಯರ್ಥವಲ್ಲ: ಹಾಸನದ ಆದಿಚುಂಚನಗಿರಿ ಮಠದಲ್ಲಿ ನಡೆದ 136 ಹುಣ್ಣಿಮೆ ಕಾರ್ಯಕ್ರಮಗಳು ವ್ಯರ್ಥವಾಗಿಲ್ಲ. ಅವುಗಳು ಅನೇಕ ಫಲಶೃತಿಗಳನ್ನು ನೀಡಿವೆ. ನೌಕರರು, ಶಿಕ್ಷಕರು ಹಾಗು ಭಕ್ತರು ತಮ್ಮೊಳಗಿನ ಶಕ್ತಿಯನ್ನು ಗಟ್ಟಿಗೊಳಿಸಿಕೊಂಡಿದ್ದು, ಭಕ್ತರ ನಿರ್ಭಯತೆ ಮತ್ತು ನಿರ್ಮೋಹತೆ ಇದರಿಂದಲೇ ಬೆಳೆಯಲು ಸಾಧ್ಯವಾಯಿತು. ಈ ಎಲ್ಲ ಪರಿವರ್ತನೆಗೆ ಶಂಭುನಾಥ ಸ್ವಾಮೀಜಿಯವರೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಠದ ವ್ಯವಸ್ಥಾಪಕ ಚಂದ್ರಶೇಖರ್ ಇದ್ದರು.