ಶ್ರೀ ಕೊಲ್ಲಾಪುರದಮ್ಮ ದೇವಿಯವರ ಸಿಡಿ ಉತ್ಸವ ಕಣ್ತುಂಬಿಕೊಂಡ ಭಕ್ತ ಸಮೂಹ. 
ಹಾಸನ

ಕೊಲ್ಲಾಪುರದಮ್ಮ ದೇವಿ ಸಿಡಿ ಉತ್ಸವ

ಶಿವಶಂಕರ್ ಎಂ. ಹೆಬ್ಬಳ್ಳ
ಗಂಡಸಿ: ಹೋಬಳಿಯ ಈಡಿಗರಹಟ್ಟಿ ಕ್ರಾಸ್ ಗ್ರಾಮದ ಶ್ರೀ ಕೊಲ್ಲಾಪುರದಮ್ಮ ದೇವಿಯವರ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ಭಾರಿ ವಿಜೃಂಭಣೆಯಿಂದ ನೆರವೇರಿತು.
ಸೋಮವಾರ ಸಂಜೆ ಶ್ರೀ ಕೊಲ್ಲಾಪುರದಮ್ಮ ದೇವಿಯವರಿಗೆ ಗ್ರಾಮದ ಸುಮಂಗಲೆಯರಿಂದ ಮದುವಣಗಿತ್ತಿ ಶಾಸ್ತ್ರ, ಕನ್ನಡಿ ಶಾಸ್ತ್ರ, ಆರತಿ ಬಾನ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಂಗಳವಾರ ರಾತ್ರಿ ಗ್ರಾಮದ ಮಹಿಳೆಯರು, ಯುವತಿಯರು ದೇವಿಯವರಲ್ಲಿ ತಾವು ಮಾಡಿಕೊಂಡ ತಮ್ಮ ಇಷ್ಟಾರ್ಥ ಹರಕೆ ತೀರಿಸಲು ಬಾಯಿ ಬೀಗ, ತಂಬಿಟ್ಟಿನ ಆರತಿ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ನಂತರ ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಂಡ ದರ್ಬಾರ್ ಮಂಟಪದ ಮೇಲೆ ಶ್ರೀದೇವಿಯನ್ನು ಕೂರಿಸಿ ವಿವಿಧ ಕಲಾ ತಂಡಗಳ ಕುಣಿತ, ಭಾರಿ ಮದ್ದು ಗುಂಡಿನ ಸುರಿಮಳೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮೆರವಣಿಗೆಯೊಂದಿಗೆ ಜಾತ್ರಾ ಮೈದಾನಕ್ಕೆ ಕರೆತರಲಾಯಿತು.
ಬುಧವಾರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ನಂತರ ರಾತ್ರಿ ಸುತ್ತಮುತ್ತಲ ಹಳ್ಳಿಗಳ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಿಡಿ ಉತ್ಸವ, ಉಯ್ಯಲೆ ಉತ್ಸವದ ನಂತರ ಕಾರ್ಯಕ್ರಮ ಸಂಪನ್ನಗೊಂಡಿತು.