ಚನ್ನರಾಯಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಜಯವಾಣಿ ಪತ್ರಿಕೆಯ ವಿಶೇಷ ಸಂಚಿಕೆ ವಿದ್ಯಾರ್ಥಿ ಮಿತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಿಸಿದರು. ಎಸ್.ಎಸ್. ಸತೀಶ್, ಕೆ.ಎನ್.ಅನಿಲ್, ಎಲ್.ಗಾಯತ್ರಿ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. 
ಹಾಸನ

ಓದುವ ಹವ್ಯಾಸದಿಂದ ಜ್ಞಾನ ವೃದ್ಧಿ

* ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯ
* ವಿದ್ಯಾರ್ಥಿ ಮಿತ್ರ ಸಂಚಿಕೆ ವಿತರಣೆ
ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಓದುಗರಲ್ಲಿ ಕ್ರಿಯಾಶೀಲತೆ ಉಂಟು ಮಾಡುವ, ದೈನಂದಿನ ವಿಚಾರಗಳನ್ನು ತಿಳಿಸುವ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಹೆಚ್ಚು ಜ್ಞಾನ ಪಡೆಯಬಹುದಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಬಾಲಿಕಾ ಸರ್ಕಾರಿ ಪೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಮಿತ್ರ ಸಂಚಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಠ್ಯದಲ್ಲಿನ ವಿಷಯಗಳ ಜತೆ ಸಾಮಾನ್ಯ ಜ್ಞಾನವನ್ನು ತಿಳಿಸಲು ವಿಜಯವಾಣಿ ಪತ್ರಿಕೆಯು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಯುಳ್ಳ, ವಿದ್ಯಾರ್ಥಿ ಸಂಚಿಕೆಯನ್ನು ಹೊರ ತಂದಿರುವುದು ಸಹಕಾರಿಯಾಗಿದೆ. ದೂರದರ್ಶನ, ಸಾಮಾಜಿಕ ಜಾಲತಾಣಗಳು ನಮಗೆ ಮಾಹಿತಿ ನೀಡಬಹುದಷ್ಟೆ. ಆದರೆ ಪತ್ರಿಕೆಗಳು ಓದುವುದರಿಂದ ಪ್ರಪಂಚದ ಆಗುಹೋಗು ನಮ್ಮ ಸ್ಮೃತಿಪಟಲದಲ್ಲಿ ಮುದ್ರೆ ಹಾಕಿದಂತೆ ಉಳಿಯುತ್ತವೆ. ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಪ್ರಚಲಿತ ವಿದ್ಯಮಾನ, ರಾಜಕೀಯ, ಶಿಕ್ಷಣ, ಕ್ರೀಡೆ, ಆರ್ಥಿಕ ವ್ಯವಹಾರ, ದೇಶ ವಿದೇಶಗಳ ಸಮಗ್ರ ಮಾಹಿತಿ, ಸಂಪಾದಕೀಯ, ವಿಮರ್ಶೆ ಲಭ್ಯವಿರುತ್ತದೆ. ಇನ್ನು ಸ್ಥಳೀಯ ಸಮಸ್ಯೆಗಳು, ಸಾಧನೆ-ಸಾಧಕರು, ವಿಜ್ಞಾನ-ಪರಿಸರಕ್ಕೆ ಪೂರಕವಾದ ವಿಶೇಷ ಲೇಖನಗಳನ್ನು ಗಮನಿಸಬಹುದು.
ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಲ್ಲಿ ಭಾಷೆಯ ಮೇಲಿನ ಹಿಡಿತದೊಂದಿಗೆ ವಿದ್ಯಾರ್ಥಿಯ ಜ್ಞಾನಭಂಡಾರವೂ ವೃದ್ಧಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಅದಕ್ಕಾಗಿಯೇ ಶಾಲಾ ಕಾಲೇಜುಗಳಿಂದಲೇ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ ಎಂದರು.
ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವ ಮೂಲಕ ಉತ್ತಮ ಅಂಕ ಗಳಿಸಿ ತಂದೆ-ತಾಯಿ ಮತ್ತು ಊರಿಗೆ ಕೀರ್ತಿ ತರಬೇಕು. ವಿಜಯವಾಣಿ ಹೊರ ತರುತ್ತಿರುವ ವಿದ್ಯಾರ್ಥಿ ಮಿತ್ರ ವಿದ್ಯಾರ್ಥಿ ಸಂಚಿಕೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪೂರಕವಾದ ಮಾಹಿತಿ ಹೊಂದಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಸಾಮಾನ್ಯ ಜ್ಞಾನ, ಕರಿಯರ್ ಮಾರ್ಗದರ್ಶನ ಮತ್ತು ಪರೀಕ್ಷಾ ತಯಾರಿಗೆ ಅಗತ್ಯವಿರುವ ಅಮೂಲ್ಯ ಮಾಹಿತಿ ದಗಿಸುತ್ತದೆ. ಎಸ್‌ಸಿಇಟಿ, ನೀಟ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುತ್ತದೆ. ವಿಜ್ಞಾನ, ಇತಿಹಾಸ ಹಾಗೂ ಗಣಿತಕ್ಕೆ ಸಂಬಂಧಿಸಿದ ಉಪಯುಕ್ತ ಲೇಖನಗಳು, ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣದ ಹಾದಿ ಹಾಗೂ ವಿವಿಧ ವೃತ್ತಿಪರ ಕೋರ್ಸ್‌ಗಳ ಬಗ್ಗೆ ಮಾಹಿತಿ, ವಿದ್ಯಾರ್ಥಿಗಳಲ್ಲಿ ನೈತಿಕತೆ, ಸ್ಪರ್ಧಾ ಮನೋಭಾವ ಮತ್ತು ಆತ್ಮವಿಶ್ವಾಸ ಮೂಡಿಸುವ ಪ್ರೇರಣಾದಾಯಕ ಬರಹಗಳನ್ನು ಪ್ರತಿ ದಿನ ಬರುವುದರಿಂದ ಎಲ್ಲರೂ ತಪ್ಪದೇ ಪತ್ರಿಕೆ ಓದಬೇಕು. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಅವರನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್.ಅನಿಲ್ ಮಾತನಾಡಿ, ಕಲಿಕೆಯು ಆಜೀವ ಪ್ರಕ್ರಿಯೆ. ಪ್ರತಿ ವಿದ್ಯಾರ್ಥಿಯೂ ಪತ್ರಿಕೆ ಓದುವ ಆಸಕ್ತಿ ಬೆಳೆಸಿಕೊಂಡರೆ ಜ್ಞಾನ ವೃದ್ಧಿ ಸಾಧಿಸಲು ಸಾಧ್ಯ ಮತ್ತು ಉತ್ತಮ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್.ಸತೀಶ್, ಪ್ರಭಾರಿ ಮುಖ್ಯ ಶಿಕ್ಷಕಿ ಎಲ್.ಗಾಯತ್ರಿ, ಶಿಕ್ಷಕರಾದ ವೆಂಕಟೇಶ್, ಶ್ರೀನಿವಾಸ್, ಧನಲಕ್ಷ್ಮೀ, ಪವಿತ್ರಾ ಮೇರಿ, ಸುನಂದಾ, ಫಯಾಜ್ ವುಲ್ಲ, ಯೋಗೀಶ್‌ಗೌಡ, ಶುಭಾ, ಈಶ್ವರ ಆಚಾರ್ ಹಾಗೂ ಅತಿಥಿ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.