ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಶಂಭುನಾಥ ಸ್ವಾಮೀಜಿ, ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಜಿಲ್ಲಾ ಧಿಕಾರಿ ಕೆ.ಎಸ್. ಲತಾಕುಮಾರಿ, ಎಸಿ ಜಗದೀಶ್ ಗಂಗಣ್ಣನವರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ ಇತರರಿದ್ದರು.
- ಕೆಂಪೇಗೌಡರ ಸಮಾಜಮುಖಿ ಚಿಂತನೆ ಎಂದಿಗೂ ಪ್ರಸ್ತುತ
- ಶ್ರೀ ಶಂಭುನಾಥ ಸ್ವಾಮೀಜಿ ಅಭಿಪ್ರಾಯ
- ಜಿಲ್ಲಾಡಳಿತದಿಂದ 517ನೇ ಜಯಂತಿ
ಹಾಸನ: ಜಾತಿ, ಧರ್ಮ, ವರ್ಗಗಳ ಭೇದವಿಲ್ಲದೆ ಎಲ್ಲ ಸಮಾಜ ಒಗ್ಗೂಡಿಸಿಕೊಂಡು ನಾಡಪ್ರಭು ಕೆಂಪೇಗೌಡರು ಬೆಂಗಳೂರಿನಂತಹ ಮಹಾನಗರ ಕಟ್ಟಿದರು. ಅವರ ಆದರ್ಶ, ಆಡಳಿತ ವೈಖರಿ ಹಾಗೂ ಸಮಾಜಮುಖಿ ಚಿಂತನೆ ಎಲ್ಲರಿಗೂ ದಾರಿದೀಪ ಎಂದು ಆದಿಚುಂಚನಗಿರಿ ಹಾಸನ-ಕೊಡಗು ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡರ 517ನೇ ಜಯಂತಿಯಲ್ಲಿ ಆಶೀರ್ವಚನ ನೀಡಿದರು.
ಕೆಂಪೇಗೌಡರು ಕೇವಲ ಕೋಟೆ ಕಟ್ಟಿದ ಆಡಳಿತಗಾರರಲ್ಲ, ಮುಂದಿನ ಹಲವು ಶತಮಾನಗಳ ಬೆಳವಣಿಗೆಯನ್ನು ಮುಂಚಿತವಾಗಿ ಊಹಿಸಿದ್ದ ದೂರದೃಷ್ಟಿಯ ನಾಯಕರು. ಅವರ ಆಡಳಿತ ವ್ಯವಸ್ಥೆ, ನಿರ್ಮಿಸಿದ ಕೆರೆ-ಕಟ್ಟೆಗಳು, ಪೇಟೆಗಳು ಹಾಗೂ ನಗರಾಭಿವೃದ್ಧಿಯ ಪರಿಕಲ್ಪನೆ ಇಂದಿಗೂ ಮಾದರಿ ಎಂದು ಬಣ್ಣಿಸಿದರು.
ಬೆಂಗಳೂರು ಇಂದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯಮಟ್ಟದಲ್ಲಿ ಗಮನ ಸೆಳೆಯಲು ಕೆಂಪೇಗೌಡರ ದೂರದೃಷ್ಟಿಯೇ ಕಾರಣ ಎಂದು ಹೇಳಿದರು.
ಇತಿಹಾಸವನ್ನು ಅರಿತವನು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಕೆಂಪೇಗೌಡ ಅವರಂತಹ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಂಸದ ಶ್ರೇಯಸ್ ಎಂ.ಪಟೇಲ್ ಮಾತನಾಡಿ, ಬೆಂಗಳೂರು ಇಂದು ವಿಶ್ವದ ಗಮನ ಸೆಳೆಯುತ್ತಿರುವ ನಗರ. ಅದಕ್ಕೆ ಅಡಿಪಾಯ ಹಾಕಿದ ಕೀರ್ತಿ ನಾಡಪ್ರಭು ಕೆಂಪೇಗೌಡ ಅವರಿಗೆ ಸಲ್ಲುತ್ತದೆ. ದೂರದೃಷ್ಟಿಯ ನಾಯಕತ್ವ ಹೇಗಿರಬೇಕು ಎಂಬುದಕ್ಕೆ ಅವರ ಜೀವನವೇ ಮಾದರಿ ಎಂದು ಹೇಳಿದರು.
ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ನಿರ್ಮಾಣಕ್ಕೆ ಈಗಾಗಲೇ ಶ್ರೀ ಶಂಭುನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಎಲ್ಲ ಸಮಾಜದ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಪುತ್ಥಳಿಯ ನಿರ್ಮಾಣ ಕಾರ್ಯಕ್ಕೆ ಮುಂಗಡ ಹಣ ಪಾವತಿಸಲಾಗಿದ್ದು, ನಗರದ ಬಸ್ ನಿಲ್ದಾಣದ ಉದ್ಯಾನವನದ ಸಮೀಪ ಪ್ರತಿಷ್ಠಾಪಿಸಲಾಗುವುದು. ಮುಂದಿನ ವರ್ಷದ ಕೆಂಪೇಗೌಡ ಜಯಂತಿಯಂದು ಪುತ್ಥಳಿ ಅನಾವರಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ ್ಪ ಮಾತನಾಡಿ, ಎಲ್ಲ ಜಾತಿ, ಜನಾಂಗಗಳನ್ನು ಒಟ್ಟಿಗೆ ಕರೆದೊಯ್ಯುವ ಮೂಲಕ ನವ ಸಮಾಜ ನಿರ್ಮಾಣ ಮಾಡಿದ ನಾಯಕ ಕೆಂಪೇಗೌಡರು ಎಂದು ಬಣ್ಣಿಸಿದರು.
ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಹಾಗೂ ಜಿಪಂ ಸಿಇಒ ಶುಭಂ ಶುಕ್ಲಾ ಮಾತನಾಡಿದರು.
ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎನ್.ಎಸ್. ಗಂಗರಾಜು ಅವರು ಕೆಂಪೇಗೌಡರ ಜೀವನ, ಆಡಳಿತ, ಇತಿಹಾಸ ಹಾಗೂ ನಗರಾಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳ ಕುರಿತು ಸವಿಸ್ತಾರ ಉಪನ್ಯಾಸ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ, ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಕೃಷ್ಣೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಚ್.ಎಲ್.ಮಲ್ಲೇಶಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ತಾರಾನಾಥ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಅಧಿಕಾರಿಗಳು ಹಾಗೂ ಗಣ್ಯರು ಇದ್ದರು.
ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ನಗರದಲ್ಲಿ ನಡೆದ ಅದ್ದೂರಿ ಮೆರವಣಿಗೆ ವಿವಿಧ ಕ್ಷೇತ್ರಗಳ ಗಣ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಜಿಲ್ಲಾ ಧಿಕಾರಿ ಕೆ.ಎಸ್. ಲತಾಕುಮಾರಿ, ಎಸಿ ಜಗದೀಶ್ ಗಂಗಣ್ಣನವರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್‌ಗೌಡ, ಮಾಜಿ ಅಧ್ಯಕ್ಷ ಎಚ್.ಬಿ.ಮದನಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ, ಮಾಜಿ ಅಧ್ಯಕ್ಷ ರವಿ ನಾಕಲಗೂಡು, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಪಿ. ತಾರಾನಾಥ್, ಉದ್ಯಮಿ ಹಾಗೂ ಸಮಾಜ ಸೇವಕ ಕಂಚಮಾರಹಳ್ಳಿ ಕಾಂತಣ್ಣ, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಗಣ್ಯರು ಜಿಲ್ಲಾಧಿಕಾರಿ ಕಚೇರಿಯಿಂದ ಹಾಸನಾಂಬ ಕಲಾಭವನದವರೆಗೂ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.