ಆಲೂರು ತಾಲೂಕು ಪಾಳ್ಯ ಹೋಬಳಿ ಕಾರ್ಜುವಳ್ಳಿಯಲ್ಲಿರುವ ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಲಿಂಗೈಕ್ಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರ 47ನೇ ವರ್ಷದ ಪುಣ್ಯ ಸ್ಮರಣೋತ್ಸವ, ಪ್ರಸ್ತುತ ಶ್ರೀಗಳವರ ಪಟ್ಟಾಧಿಕಾರದ ಐದನೇ ವಾರ್ಷಿಕೋತ್ಸವ-ಜನ್ಮ ವರ್ಧಂತಿ ಮಹೋತ್ಸವದಲ್ಲಿ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿಮೆಂಟ್ ಮಂಜು, ಸಿದ್ದೇಶ್ ನಾಗೇಂದ್ರ ಇದ್ದರು. 
ಹಾಸನ

ವೈಚಾರಿಕ ಪ್ರಜ್ಞೆ ಬೆಳೆದಂತೆ ಸಂಸ್ಕೃತಿ ಸಭ್ಯತೆ ಮಾಯ

ಸತೀಶ್ ಚಿಕ್ಕಕಣಗಾಲು ಆಲೂರು: ಸುಖ, ಶಾಂತಿಯುತ ಬದುಕಿಗೆ ಧರ್ಮಾಚರಣೆ ಬಹಳ ಮುಖ್ಯ. ಗುರಿಯಿಲ್ಲದ ಮತ್ತು ಗುರಿ ಸಾಧಿಸದ ಬದುಕು ವ್ಯರ್ಥ. ಕ್ರಿಯಾಶೀಲ ಜೀವನ ಉನ್ನತಿಗೆ ಹೆದ್ದಾರಿ. ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ತಾಲೂಕಿನ ಪಾಳ್ಯ ಹೋಬಳಿ ದಲ್ಲಿ ಲಿಂಗೈಕ್ಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರ 47ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ ಶ್ರೀಗಳ ಪಟ್ಟಾಧಿಕಾರದ ಐದನೇ ವಾರ್ಷಿಕೋತ್ಸವ-ಜನ್ಮ ವರ್ಧಂತಿ ಮಹೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಧರ್ಮ ಸಂವರ್ಧನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರಪಂಚದಲ್ಲಿ ಭಯ, ಭೀತಿ, ಉದ್ವೇಗ, ಚಿಂತೆ, ಒತ್ತಡ ಎಲ್ಲವೂ ಇವೆ. ಅವಿನಾಶಿಯಾದ ಸತ್ಯಶಿವನ ಮೊರೆ ಹೊಕ್ಕರೆ ಚಿಂತೆ, ಭೀತಿ ದೂರ. ಆಧುನಿಕ ಯುಗದಲ್ಲಿ ಶಾಂತಿ ತೃಪ್ತಿ ಕಾಣುತ್ತಿಲ್ಲ. ಬದುಕಿನಲ್ಲಿ ಹೋರಾಟ, ಸಂಘರ್ಷ ನಿತ್ಯ ತಪ್ಪಿದ್ದಲ್ಲ. ಒಂದೆಡೆ ವೈಚಾರಿಕ ಪ್ರಜ್ಞೆ ಬೆಳೆಯುತ್ತಿದೆ, ಇನ್ನೊಂದೆಡೆಗೆ ಸಂಸ್ಕೃತಿ ಸಭ್ಯತೆ ಮಾಯವಾಗುತ್ತಿವೆ. ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿ ಕತ್ತಲೆ ತುಂಬಿಕೊಂಡಿದ್ದಾನೆ ಎಂದು ನುಡಿದರು.
ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಮರೆಯಬಾರದು. ಮೂಲ ಸಂಸ್ಕೃತಿ ಮರೆತರೆ ಬದುಕಿನಲ್ಲಿ ಸೋಲು ನಿಶ್ಚಿತವೆಂದು ಅನುಭಾವಿಗಳು ಹೇಳಿದ್ದುಂಟು. ವೀರಶೈವ ಧರ್ಮ ಆದರ್ಶ ಮಾನವೀಯ ಮೌಲ್ಯಗಳನ್ನು ಯಾವಾಗಲೂ ಬೆಳೆಸುತ್ತಲೇ ಬಂದಿದೆ. ಮನುಷ್ಯ ಜೀವನದಲ್ಲಿ ಧರ್ಮ, ಯಶಸ್ಸು, ನೀತಿ, ದಕ್ಷತೆ ಮತ್ತು ಒಳ್ಳೆಯ ಮಾತು ಅಳವಡಿಸಿಕೊಂಡು ಬಾಳಿದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಕಾರ್ಜುವಳ್ಳಿ ಹಿರೇಮಠ ಬಾಳೆಹೊನ್ನೂರು ಶ್ರೀ ರಂಭಾಪುರ ಪೀಠದ ಶಾಖಾ ಮಠ, ಇಂದಿನ ಪಟ್ಟಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಪಟ್ಟಾಧಿಕಾರ ಸ್ವೀಕರಿಸಿ ಐದು ವರ್ಷಗಳಾಗಿದೆ. ಶ್ರೀಗಳವರ ಕ್ರಿಯಾಶೀಲ ಬದುಕು, ಸಂಸ್ಕೃತಿಯ ಸಂವರ್ಧನೆಯ ಕಾರ್ಯ ಸಕಲರ ಮೆಚ್ಚುಗೆಗೆ ಪಾತ್ರವಾಗಿವೆ. ಪಟ್ಟಾಧಿಕಾರ ಮತ್ತು ಜನ್ಮ ದಿನೋತ್ಸವ ಆಚರಿಸಿಕೊಳ್ಳುತ್ತಿರುವ ಶ್ರೀಗಳ ಬದುಕಿನಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಜರುಗಲಿ ಎಂದು ಹಾರೈಸಿದರು. ಬಳಿಕ ರೇಷ್ಮೆ ಮಡಿ, ಉಡುಗೊರೆ, ಸ್ಮರಣಿಕೆ ಫಲ ತಾಂಬೂಲವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಜಗದ್ಗುರುಗಳ ಆಶೀರ್ವಾದ ಕಾರಣ
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವ ಜೀವನ ಮೌಲ್ಯಗಳು ಶಾಶ್ವತವಾಗಿವೆ. ಜೀವನ ಮೌಲ್ಯಗಳು ನಾಶಗೊಂಡರೆ ಬದುಕಿಗೆ ಬೆಲೆ ಬರಲಾರದು. ಉತ್ತಮ ಚಿಂತನೆಗಳು ನಮ್ಮ ಬದುಕಿನ ಜತೆಗೆ ಪರರ ಬದುಕಿಗೂ ಬೆಳಕಾಗಬಲ್ಲವು. ಜಗತ್ತಿನಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇವೆ. ನೋಡುವ ದೃಷ್ಟಿ ಒಳ್ಳೆಯವರ ಕಡೆಗೆ ಇರಬೇಕಾಗುತ್ತದೆ. ಹುಡುಕುತ್ತ ಹೊರಟ ಧರ್ಮರಾಯನಿಗೆ ಕೆಟ್ಟವರಾರೂ ಕಾಣಲಿಲ್ಲ. ಎಷ್ಟೇ ಹುಡುಕಿದರೂ ದುರ್ಯೋಧನನಿಗೆ ಒಳ್ಳೆಯವರು ಕಾಣಲಿಲ್ಲ. ಸಜ್ಜನರ ಜತೆಗಿದ್ದು ಸತ್ಪುರುಷರ ಹಾದಿಯಲ್ಲಿ ಸಾಗಿದಾಗ ಸುಖ, ಶಾಂತಿ ಪ್ರಾಪ್ತವಾಗುತ್ತದೆ. ಐದು ವರ್ಷಗಳಿಂದ ಶ್ರೀ ಮಠದ ಬೆಳವಣಿಗೆಗೆ ಜಗದ್ಗುರುಗಳ ಆಶೀರ್ವಾದವೇ ಕಾರಣ ಎಂದರು.
ಬಿಜೆಪಿ ಮುಖಂಡ ಸಿದ್ದೇಶ ನಾಗೇಂದ್ರ ಸಮಾರಂಭ ಉದ್ಘಾಟಿಸಿದರು. ಶಾಸಕ ಸಿಮೆಂಟ್ ಮಂಜು, ಸಂಸದ ಶ್ರೇಯಸ್ ಪಟೇಲ್ ಮಾತನಾಡಿದರು.
ಕಾರ್ಯಕ್ರಮಕ್ಕೆ ಮುನ್ನ ಶ್ರೀಮಠದ ಆವರಣದಲ್ಲಿ ಅಮೃತ ಸಂಜೀವಿನಿ ಮಹಾಮೃತ್ಯುಂಜಯ ಹೋಮ, ಪೂರ್ಣಾಹುತಿ, ರಕ್ಷಾಧಾರಣೆ, ಶ್ರೀ ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಇಷ್ಟನಾಗ-ಸಿದ್ಧಿನಾಗ-ಮುಕ್ತಿನಾಗ ದೇವರ ಸನ್ನಿಧಿಯಲ್ಲಿ ಹಾಗೂ ಶ್ರೀಮಠದ ಹಿರಿಯ ಶ್ರೀಗಳವರ ಸನ್ನಿಧಿಯಲ್ಲಿ ಭಸ್ಮಜಲಾಭಿಷೇಕ, ಅಷ್ಟೋತ್ತರ ಅರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ನಡೆದವು. ಶ್ರೀಮಠದ ಆವರಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಪೂಜಾ-ವ್ರತ ಆಚರಣೆ, ವೃತಕಥಾ ಶ್ರವಣ, ಮಹಾನೈವೇದ್ಯ, ಮಹಾಮಂಗಳಾರತಿ ಕಾರ್ಯಕ್ರಮಗಳು ಶ್ರೀಮಠದ ಪುರೋಹಿತ ಬಳಗ ಹಾಗೂ ಶಿವಾನುಗ್ರಹ ಸೇವಾ ಸಂಸ್ಥೆ ನಾಗರನವಿಲೆ ಹಾಸನ ಜಿಲ್ಲೆ ಇವರ ವತಿಯಿಂದ ಜರುಗಿದವು.
ಧರ್ಮ ಸಂವರ್ಧಕ ಪ್ರಶಸ್ತಿ
ಶ್ರೀಮಠದಿಂದ ನೀಡುವ ಧರ್ಮ ಸಂವರ್ಧಕ ಪ್ರಶಸ್ತಿಯನ್ನು ಬೇಲೂರು ಕ್ಷೇತ್ರದ ಶಾಸಕ ಎಚ್.ಕೆ ಸುರೇಶ್ ಅವರಿಗೆ ನೀಡಲಾಯಿತು. ಗೌರವ ಗುರು ರಕ್ಷೆಯನ್ನು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾ ಮಂಜುನಾಥ್ ಬಾಳ್ಳುಪೇಟೆ, ಬಿಜೆಪಿ ಆಲೂರು ತಾಲೂಕು ಅಧ್ಯಕ್ಷೆ ಉಮಾ ರವಿಪ್ರಕಾಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತಾ ಕುಮಾರ್, ಎಸ್.ಎಲ್.ವಿ ಇಂಟರ್ ನ್ಯಾಷನಲ್ ಸ್ಕೂಲ್ನ ಸಂಸ್ಥಾಪಕ ರುದ್ರೇಗೌಡ, ಉದ್ಯಮಿ ಪ್ರಕಾಶ್ ರಣಘಟ್ಟ, ಯಲಗನಹಳ್ಳಿ ಪ್ರಾರ್ಥನ, ಮೆಣಸಮಕ್ಕಿ ಅನೂಪ್ ರಾಜ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಎಸ್.ಮೈತ್ರಿ, ಕಾರಜೋಹಳ್ಳಿಯ ರೇಖಾ ಉಮೇಶ್, ಸವಣೂರಿನ ಗುರುಪಾದಯ್ಯ, ಯಶ್ವಂತ್ ಕಾರ್ಜುವಳ್ಳಿ, ಮಂಜುನಾಥ್ ಅವರಿಗೆ ನೀಡಲಾಯಿತು.
ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಸುಳ್ಳ ಪಂಚಗ್ರಹ ಹಿರೇಮಠದ ಶ್ರೀ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಡೆನಂದಿಹಳ್ಳಿಯ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿಯ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಲಿಂಗಸೂರಿನ ನಂದಿಕೇಶ್ವರಿ ಅಮ್ಮನವರು, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಸಮಾಜ ಸೇವಕ ಪುನೀತ್ ಬನ್ನಹಳ್ಳಿ, ಹಿರಿಯ ವಕೀಲ ಆರ್.ಬಿ.ಸುರೇಶ್, ಬಿಜೆಪಿ ಯುವ ಮುಖಂಡ ರಾಜಶೇಖರ್ ಗಂಜಿಗೆರೆ, ತಾಳೂರು ಗ್ರಾಮ ಪಂಚಾಯಿತಿ ಸದಸ್ಯ ಷಡಕ್ಷರಿ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯೆ ಬಿ.ಕೆ.ಚಂದ್ರಕಲಾ ಹಾಜರಿದ್ದರು.