ಆಲೂರು ತಾಲೂಕಿನ ಪಾಳ್ಯ ಹೋಬಳಿ ಚಿಕ್ಕಕಣಗಾಲು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ಕೃಷ್ಣಮೂರ್ತಿ, ಮಹೇಶ್ವರಯ್ಯ, ಆನಂದ್ ಇತರರು ಇದ್ದರು.
ಆಲೂರು: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ವೇದಿಕೆ ಸಹಕಾರಿಯಾಗಿದೆ. ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಆ ಪ್ರತಿಭೆ ಗುರುತಿಸಿ ಹೊರತರಲು ಇಂಥ ವೇದಿಕೆಗಳು ಸಹಕಾರಿ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಚಿಕ್ಕಕಣಗಾಲು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಹೆಚ್ಚೆಚ್ಚು ಭಾಗವಹಿಸಬೇಕು. ಪ್ರೌಢಶಾಲೆಯ ಹಂತ ಎಂಬುದು ತಳಪಾಯದಂತೆ. ಇಲ್ಲಿ ಗಟ್ಟಿಯಾಗಿ ನಿಂತರೆ ಮುಂದೆ ಗಟ್ಟಿಯಾಗಿ ನಿಲ್ಲುವುದಕ್ಕೆ ಸಾಧ್ಯ. ಈ ಹಂತದಲ್ಲಿರುವಾಗಲೇ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರದ ಗುಣಗಳನ್ನು ಕಲಿಸಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು, ಮಕ್ಕಳಿಗಾಗಿ ಸಂಪತ್ತು ಸಂಗ್ರಹಿಸುವ ಬದಲು, ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕಾರಭರಿತ ಶಿಕ್ಷಣ ನೀಡಿ ಮಕ್ಕಳನ್ನೇ ರಾಷ್ಟ್ರದ ಅಮೂಲ್ಯ ಆಸ್ತಿಯನ್ನಾಗಿಸಬೇಕು ಎಂದರು.
ಚಿಕ್ಕಕಣಗಾಲು ಸರ್ಕಾರಿ ಪ್ರೌಢಶಾಲೆಗೆ ಒಂದು ನೂತನ ರಂಗಮಂದಿರ ನಿರ್ಮಾಣ ಮಾಡಲು ಅನುದಾನ ಮಿಸಲಿಡುವುದಾಗಿ ಭರವಸೆ ನೀಡಿದರು.
ಶಾಲೆಯ ಪ್ರಭಾರ ಮುಖ್ಯಶಿಕ್ಷಕ ರಘು ಮಾತನಾಡಿ, ಮಕ್ಕಳು ಮನೆಯ ನಂದಾದೀಪವಿದ್ದಂತೆ. ಭವಿಷ್ಯದ ಆಶಾಜ್ಯೋತಿಗಳು. ಅವರ ಬುದ್ಧಿ ಚುರುಕುಗೊಳಿಸಿ ಸದೃಢರನ್ನಾಗಿಸುವ ಗುಣಮಟ್ಟದ ಶಿಕ್ಷಣ ಜತೆಗೆ ಅವರಿಗೆ ಸಾಂಸ್ಕೃತಿಕ ಚುಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ಕೊಡುವುದು ಅತ್ಯಗತ್ಯ ಎಂದು ತಿಳಿಸಿದರು.
2025-26ನೇ ಸಾಲಿನ ಪಾಳ್ಯ ಹೋಬಳಿ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಚಿಕ್ಕಕಣಗಾಲು ಸರ್ಕಾರಿ ಪ್ರೌಢಶಾಲೆ, ಕಣತೂರು ಸರ್ಕಾರಿ ಪ್ರೌಢಶಾಲೆ, ಮಡಬಲು ಸರ್ಕಾರಿ ಪ್ರೌಢಶಾಲೆ, ಕಾಮತಿಕೊಡಿಗೆ ಸರ್ಕಾರಿ ಪ್ರೌಢಶಾಲೆ, ಬೆಟ್ಟಳ್ಳಿ ಕ್ರಾಸ್ ಸರ್ಕಾರಿ ಪ್ರೌಢಶಾಲೆ, ನೀಲಲೋಚನಾ ಪಾಳ್ಯ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಸೇಂಟ್ ಜೋಸೆಫ್ ಪ್ರೌಢಶಾಲೆ, ಕಿರಣ್ ಕಾನ್ವೆಂಟ್ ಕಣತೂರು ಶಾಲಾ ತಂಡಗಳು ಭಾಗವಹಿಸಿದ್ದವು.
ಸನ್ಮಾನ: ಶಾಸಕ ಸಿಮೆಂಟ್ ಮಂಜು, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ ಪರಮೇಶ್ವರಪ್ಪ, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಡೇರಿ ಅಧ್ಯಕ್ಷ ರವಿಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಸಕರು ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ಮಹೇಶ್ವರಯ್ಯ, ಆನಂದ್, ಗಂಗಾಧರ್, ಸ್ವಾಮಿ, ಲತಾ, ಸುಜಾತಾ, ಸಾವರ್ತಿ, ಗ್ರಾಮ ಪಂಚಾಯಿತಿ ಪಿಡಿಒ ಮಂಜುನಾಥ್, ಸದಸ್ಯರಾದ ರವಿ, ನೇತ್ರಾ ರಾಜಶೇಖರ್, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ, ಶಾಲೆ ಹಿರಿಯ ವಿದ್ಯಾರ್ಥಿಗಳ ಬಳಗದ ಸದಸ್ಯರು, ಶಿಕ್ಷಕರು ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಾಲೆಗಳ ಮುಖ್ಯಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.