ಹಾಸನ: ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದು ಪ್ರಾಧ್ಯಾಪಕ ಎಚ್.ಎಸ್.ಸತ್ಯನಾರಾಯಣ ಹೇಳಿದರು.
ನಗರದ ಬಿ. ಕಾಟಿಹಳ್ಳಿಯ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕಲರವ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಯು ಪ್ರತಿ ಇಲಾಖೆಯಲ್ಲಿ ಅನುಷ್ಠಾನಗೊಳ್ಳಬೇಕು. ಇತ್ತೀಚಿನ ದಿನದಲ್ಲಿ ಗ್ರಾಮೀಣ ಭಾಗದ ಬ್ಯಾಂಕ್ಗಳಲ್ಲಿ ಕನ್ನಡ ಭಾಷೆ ಬಾರದವರನ್ನು ನೇಮಕ ಮಾಡಿಕೊಳ್ಳುತ್ತಿರುವುದರಿಂದ ಗ್ರಾಹಕರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಕನ್ನಡಿಗರಿಗೆ ಮೊದಲು ಪ್ರಾಶಸ್ತ್ಯ ನೀಡಬೇಕು ಎಂದು ಒತ್ತಾಯಿಸಿದರು. ಅಧ್ಯಾಪಕ ಡಿ.ಬಿ.ರಂಗೇಗೌಡ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಯಾಂಪಸ್ ಅನಿಮೇಟರ್ ಆರ್.ಎಫ್.ಒಲ್ವಿನ್ ವೇಗಸ್ ಮಾತನಾಡಿದರು. ಅಧ್ಯಾಪಕ ಮೋಹನ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸೌಧಾಮಿನಿ ಮತ್ತು ತಂಡ ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು. ನಂತರ ವಿವಿಧ ಕ್ಷೇತ್ರದ ಸಾಧಕರು ಹಾಗೂ ಕನ್ನಡ ಭಾಷೆ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಇನ್ನು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹುಲಿ ವೇಷ, ಚಿಟ್ಟಿಮೇಳ, ವಾದ್ಯ ಕಲಾವಿದರ ಕಲಾ ಪ್ರದರ್ಶನ ಗಮನ ಸೆಳೆಯಿತು.
ವೇದಿಕೆಯಲ್ಲಿ ಉಪ ಪ್ರಾಂಶುಪಾಲ ವಿ.ಪ್ರದೀಪ್ ಕುಮಾರ್, ವಿತ್ತಾಧಿಕಾರಿ ಫಾ.ಅರವಿಂದ್ ರಾಯ್ಸ, ಕನ್ನಡ ಸಂಘದ ಸಂಯೋಜಕಿ ಮೋನಿಕಾ ಮತ್ತು ಕನ್ನಡ ಸಂಘದ ಅಧ್ಯಕ್ಷ ಹರ್ಷಗೌಡ, ಉಪಾಧ್ಯಕ್ಷ ಕಿಶನ್ ಗೌಡ, ಕಾರ್ಯದರ್ಶಿ ಮೇಘನಾ, ಋತು, ಕುಶಾಲ್, ಶಶಾಂಕ್ ಇತರರು ಇದ್ದರು.