ಚಗಚಗೆರೆ ಗ್ರಾಮದಲ್ಲಿ ಕನಕದಾಸರ 538ನೇ ಜಯಂತ್ಯುತ್ಸವ ಪ್ರಯುಕ್ತ ಕನಕದಾಸರ ಭಾವಚಿತ್ರವನ್ನು ಬೆಳ್ಳಿ ರಥದ ಮೇಲೆ ಕೂರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
- ತಾಪಂ ಮಾಜಿ ಸದಸ್ಯ ಈಶ್ವರಪ್ಪ ಅಭಿಪ್ರಾಯ
ಗಂಡಸಿ: ದಾಸ ಶ್ರೇಷ್ಠ ಕನಕದಾಸರ ಸಮಾಜಮುಖಿ ಚಿಂತನೆಗಳು ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಈಶ್ವರಪ್ಪ ಹೇಳಿದರು.
ಹೋಬಳಿಯ ಚಗಚಗೆರೆ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕನಕದಾಸರ 538ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾಸ ಶ್ರೇಷ್ಠ ಕನಕದಾಸರ ವಿಚಾರಧಾರೆಗಳನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಅರಿಯಬೇಕಾಗಿದೆ. ದಾಸರು ಒಂದು ವರ್ಗಕ್ಕೆ ಸೀಮಿತವಾದ ದಾಸ ಶ್ರೇಷ್ಠರಾಗಿರಲಿಲ್ಲ. ಒಬ್ಬ ವ್ಯಕ್ತಿ ಸಂಸ್ಕಾರಯುತ ಜೀವನ ಮಾಡಿದರೆ ಉನ್ನತಿ ಸಾಧಿಸಬಹುದು ಎಂಬುದನ್ನು ತಮ್ಮ ಕೃತಿಗಳ ಮೂಲಕ ಸಮಾಜಕ್ಕೆ ತಿಳಿಸಿಕೊಟ್ಟ ಮಹಾನ್ ಸಾಧಕರು ಕನಕದಾಸರು ಎಂದರು.
ದಾಸ ಶ್ರೇಷ್ಠರ ಆದರ್ಶಗಳನ್ನು ಎಲ್ಲರೂ ಪಾಲಿಸುವ ಮೂಲಕ ಸಮಾಜದ ಉನ್ನತಿಗೆ ನಾವು ಅಲ್ಪ ಪ್ರಮಾಣವಾದರೂ ಕೊಡುಗೆ ನೀಡೋಣ ಎಂದರು.
ಗ್ರಾ.ಪಂ.ಉಪಾಧ್ಯಕ್ಷೆ ಪ್ರಮೀಳಾ ಮರಿಯಪ್ಪ, ಗ್ರಾ.ಪಂ. ಸದಸ್ಯ ಕುಮಾರ್, ರಾಜು, ಶಿವಪ್ಪ ಮತ್ತು ಗ್ರಾಮಸ್ಥರು ಇದ್ದರು.