ಅರಸೀಕೆರೆ ನಗರದ ಕಸ್ತೂರಬಾ ಸೇವಾಶ್ರಮದ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿದರು. ಕೆ.ಎಂ.ಶಿವಲಿಂಗೇಗೌಡ, ಸಂತೋಷ್‌ಕುಮಾರ್, ಮದನಗೌಡ, ಕೆಂಚೇಗೌಡ, ಆರ್.ಅನಂತ ಕುಮಾರ್ ಇತರರಿದ್ದರು.
ಅರಸೀಕೆರೆ: ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಗುರುತರ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ನಗರಕ್ಕೆ ಹೊಂದಿಕೊಂಡಂತಿರುವ ಕಸ್ತೂರಬಾ ಸೇವಾಶ್ರಮದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಮನೆ ಮಾಡಿರುವ ಮೌಢ್ಯಗಳ ನಿವಾರಣೆಗೆ ಮೊದಲ ಆದ್ಯತೆಯಾಗಬೇಕು. ಆಗ ಮಾತ್ರವೇ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು ಒಗ್ಗೂಡಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ಔಚಿತ್ಯಪೂರ್ಣವಾಗಿದೆ. ಪ್ರಾಚೀನ ಕಾಲದಲ್ಲಿ ನಾರದ ಮುನಿಗಳು ಸುದ್ದಿ ತಲುಪಿಸುವ ಕೆಲಸ ಮಾಡುತ್ತಿದ್ದರು. ಇದೀಗ ಸುದ್ದಿ ಮಾಧ್ಯಮಗಳು ಹೊಣೆಗಾರಿಕೆ ಹೊತ್ತಿವೆ ಎಂದು ಹೇಳಿದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ನಗರದಲ್ಲಿ ಪತ್ರಕರ್ತರ ಭವನ ನಿರ್ಮಿಸಲು ನಿವೇಶನ ಕೊಡಿಸಿದ್ದು ಈಗಾಗಲೇ ಶಂಕುಸ್ಥಾಪನೆ ಮಾಡಿದ್ದೇನೆ. ಭವನದ ನಿರ್ಮಾಣ ವೆಚ್ಚವನ್ನು ಭರಿಸಲಿದ್ದು ಯಾರನ್ನೂ ಬೇಡುವ ಅಗತ್ಯವಿಲ್ಲ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿಕೊಂಡು ಹೋಗಿ ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್, ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಬಿ.ಮದನಗೌಡ, ಜಿಲ್ಲಾಧ್ಯಕ್ಷ ಜೆ.ಆರ್. ಕೆಂಚೇಗೌಡ , ಆರ್.ಅನಂತಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲ ಮಾತನಾಡಿದರು. ಪೌರಾಯುಕ್ತ ಕೃಷ್ಣಮೂರ್ತಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.