ಡಿಸಿ ಲತಾ ಕುಮಾರಿ 
ಹಾಸನ

ಆರೋಗ್ಯವಂತ, ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯವಂತ, ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ
  • ಜಿಲ್ಲಾಧಿಕಾರಿ ಲತಾಕುಮಾರಿ ಮನವಿ
  • ಡಿಸಿ ಕಚೇರಿ ಸಭಾಂಗಣದಲ್ಲಿ ಸಭೆ
ಹಾಸನ: ಆರೋಗ್ಯವಂತ ಮತ್ತು ಸುರಕ್ಷಿತ ಸಮಾಜ ನಿರ್ಮಾಣಕ್ಕಾಗಿ ಬಾಲ್ಯ ವಿವಾಹ, ಫೋಕ್ಸೋ ಪ್ರಕರಣಗಳನ್ನು ತಡೆಗಟ್ಟುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಂಕಷ್ಟಕ್ಕೆ ಸಿಲುಕಿದ ಹೆಣ್ಣು ಮಕ್ಕಳು 181 ಮಹಿಳಾ ಸಹಾಯವಾಣಿಗೆ ಕರೆ ಮಾಡಿದಾಗ ನಿಜವಾಗಿ ಅವರಿಗೆ ಸಹಾಯ ದೊರಕಬೇಕು. ಈ ನಿಟ್ಟಿನಲ್ಲಿ ಸಹಾಯವಾಣಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಯಾವ ರೀತಿ ಸ್ಪಂದಿಸಿ ಕೆಲಸ ಮಾಡಬೇಕೆಂದು ತರಬೇತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಕ್ತಿ ಸದನಕ್ಕೆ ದಾಖಲಾದ ಮಹಿಳೆಯರ ಆರೋಗ್ಯ ತಪಾಸಣೆಗೆ ಕ್ರಮವಹಿಸಬೇಕು. ಮಾನವ ಮತ್ತು ಮಹಿಳೆಯರ ಹಕ್ಕುಗಳು ಉಲ್ಲಂಘನೆ ಆಗದಂತೆ ನಿಗಾವಹಿಸಿ ಅಸುರಕ್ಷಿತ ಹೆಣ್ಣು ಮಕ್ಕಳ ರಕ್ಷಣೆಗೆ ಒತ್ತು ನೀಡಬೇಕು. ಇನ್ನು ನಿರಾಶ್ರಿತರು ರಸ್ತೆ ಬದಿಯಲ್ಲಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಫ್ಲೈ ಓವರ್‌ಗಳಲ್ಲಿ, ಪಾರ್ಕ್‌ಗಳಲ್ಲಿ ಮಲಗಬಾರದು. ಬೀದಿಯಲ್ಲಿ ಮಾನಸಿಕ ಅಸ್ವಸ್ಥ ಹೆಣ್ಣು ಮಕ್ಕಳು ಓಡಾಡುತ್ತಿರುವವರನ್ನು ಗುರುತಿಸಿ ನಿರಾಶ್ರಿತರ ಕೇಂದ್ರದಲ್ಲಿ ತಂಗಲು ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಯಾವುದೇ ಮಗು ಎಲ್ಲೇ ಸಿಕ್ಕರೂ ನೇರವಾಗಿ ಹತ್ತಿರದ ಪೊಲೀಸ್ ಠಾಣೆಗೆ ನೀಡಬೇಕು. ಅಲ್ಲದೆ ಹೆಣ್ಣು ಮಕ್ಕಳು ಧೈರ್ಯದಿಂದ ದುಡಿದು ಜೀವನ ನಡೆಸಲು ಮುಂದಾಗಬೇಕು. ಸಂಕಷ್ಟಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸುವುದರ ಕತೆಗೆ ಕೌಶಲ ತರಬೇತಿ ನೀಡಿ ಉತ್ತೇಜನ ನೀಡುವ ಮೂಲಕ ಸ್ವಂತ ಕೆಲಸ ಮಾಡಲು ಪ್ರೇರಣೆ ನೀಡಬೇಕು ಎಂದು ತಿಳಿಸಿದರು.
ವರದಕ್ಷಿಣೆ, ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಸಹಾಯ ಒದಗಿಸಲು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ತೆರೆಯಲಾದ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಒದಗಿಸಿ ಅವರು ಸ್ವಾವಲಂಬಿಯಾಗಿ ಜೀವನ ನಡೆಸಲು ತರಬೇತಿ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ಒದಗಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಶಿಶುಪಾಲನಾ ಕೇಂದ್ರ ತೆರೆಯಲು ಕ್ರಮವಹಿಸಬೇಕು. ಮಹಿಳೆಯರು ಮತ್ತು ಮಕ್ಕಳ ಸಾಗಣೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಕಾವಲು ಸಮಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ತಿಳಿಸಿದರು.
ವಿದ್ಯಾಸಂಸ್ಥೆಗಳಲ್ಲಿ ಮೂರು ವರ್ಷಗಳಿಂದ ಮಹಿಳಾ ದೌರ್ಜನ್ಯ ತಡೆಗೆ ಆಂತರಿಕ ದೂರು ನಿವಾರಣಾ ಸಮಿತಿ ರಚಿಸದೆ ಇರುವವರಿಗೆ 50 ಸಾವಿರ ದಂಡ ವಿಧಿಸುವಂತೆ ಸೂಚನೆ ನೀಡಿದರು. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಿ ಒದಗಿಸಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ನಗರ ಪ್ರದೇಶಗಳಲ್ಲಿ ನಿವೇಶನ ಗುರುತಿಸಿ ನೀಡಲು ಯೋಜನಾ ನಿರ್ದೇಶಕರಿಗೆ ನಿರ್ದೇಶನ ನೀಡಿದರು.
ಅಪೌಷ್ಟಿಕ ಮಕ್ಕಳು ಮತ್ತು ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಿ ಆರೋಗ್ಯ ಸುಧಾರಣೆಯಾಗಿ ಸಾಮಾನ್ಯ ಸ್ಥಿತಿಗೆ ತರಲು ನಿಗಾ ವಹಿಸಬೇಕು. ಚೇತನಾ ಯೋಜನೆಯಡಿ ಲೈಂಗಿಕ ವೃತ್ತಿನಿರತ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು 30 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಆರೋಗ್ಯ ಸಮಸ್ಯೆ, ವಯೋಮಾನ ಆಧಾರಿತವಾಗಿ ಮೊದಲ ಆದ್ಯತೆ ನೀಡಿ ಪ್ರೋತ್ಸಾಹ ಧನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ 29 ಲಿಂಗತ್ವ ಅಲ್ಪಸಂಖ್ಯಾತರಿಗೆ ಪಡಿತರ ಚೀಟಿಯನ್ನು ನೀಡಿ ಮೈತ್ರಿ ಯೋಜನೆಯಡಿ ಸೌಲಭ್ಯ ಒದಗಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ನಗರಾಭಿವೃದ್ದಿ ಪ್ರಾಧಿಕಾರದಿಂದ ನಿವೇಶನ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಲಿಂಗತ್ವ ಅಲ್ಪ ಸಂಖ್ಯಾತರಿಗೆ ಇರುವ ಕೌಶಲ ಆಧಾರಿಸಿ ಕೆಲಸ ಮಾಡಲು ಉದ್ಯೋಗಿನಿ ಯೋಜನೆಯಡಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಒದಗಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಡಿವೈಎಸ್‌ಪಿ ಗಂಗಾಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಧರಣಿ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್, ಸಮಿತಿ ಸದಸ್ಯರುಗಳಾದ ರೂಪ ಹಾಸನ್, ಕೆ.ಟಿ.ಜಯಶ್ರೀ ಇತರರಿದ್ದರು.