ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ತಾಲೂಕಿನ ಕುಮಾರ ಪ್ರೌಢಶಾಲೆ ಆವರಣ ಸಾಮಾಜಿಕ ಅರಣ್ಯೀಕರಣದ ಅಂಗವಾಗಿ ಗಣ್ಯರು ಹಾಗೂ ವಿದ್ಯಾರ್ಥಿಗಳು ಗಿಡಗಳನ್ನು ನೆಡುತ್ತಿರುವುದು.  
ಹಾಸನ

ಹಸಿರು ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸಿ

ಪ್ರಮುಖ ಮುಖ್ಯಾಂಶಗಳು

  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಯೋಜನಾಧಿಕಾರಿ ಮಂಜುಳಾ ಅಭಿಪ್ರಾಯ
ಬೇಲೂರು: ಇಂದು ನೆಡುವ ಒಂದು ಗಿಡ ಮುಂದಿನ ಪೀಳಿಗೆಗೆ ಅಮೂಲ್ಯ ಕೊಡುಗೆಯಾಗಲಿದ್ದು, ವಿದ್ಯಾರ್ಥಿಗಳು ತಲಾ ಒಂದೊಂದು ಗಿಡ ನೆಟ್ಟು ಅದರ ಸಂಪೂರ್ಣ ಪೋಷಣೆ ಮಾಡುವ ಸಂಕಲ್ಪ ಮಾಡಿದರೆ ಹಸಿರು ಕರ್ನಾಟಕ ನಿರ್ಮಾಣ ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಯೋಜನಾಧಿಕಾರಿ ಮಂಜುಳಾ ಹೇಳಿದರು.
ತಾಲೂಕಿನ ತಗರೆ ಗ್ರಾಮದ ಕುಮಾರ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮದಿಂದ ಸಾಕಷ್ಟು ಪ್ರಕೃತಿ ವಿಕೋಪದಂತಹ ಘಟನೆಗಳನ್ನು ಕಾಣುವಂತ್ತಾಗಿದೆ. ಆದ್ದರಿಂದ ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಎಚ್ಚೆತ್ತು ನಮ್ಮ ಪರಿಸರದ ಉಳಿವಿಗಾಗಿ ಎಲ್ಲೆಲ್ಲಿ ಸ್ಥಳವಕಾಶ ಸಿಗುತ್ತದೆಯೋ ಅಲ್ಲೆಲ್ಲ ಗಿಡಗಳನ್ನು ನೆಟ್ಟು ಪೋಷಿಸಲು ಮುಂದಾಗಬೇಕು ಎಂದರು.
ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಅದ್ದೂರಿ ಕುಮಾರ್ ಮಾತನಾಡಿ, ಇತ್ತೀಚೆಗೆ ಕಾಡು ಪ್ರಾಣಿಗಳು ನಾಡಿಗೆ ಬರಲು ಪ್ರಕೃತಿ ನಾಶವೇ ಕಾರಣ. ಆದ್ದರಿಂದ ನಮಗೆ ಮತ್ತು ನಮ್ಮ ಮುಂದಿನ ಜನತೆಗಾಗಿಯಾದರೂ ಪರಿಸರ ಉಳಿಸಲು ಹೋರಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿ ಪರಿಸರದ ಅಗತ್ಯತೆಯನ್ನು ತಿಳಿದು ಗಿಡಗಳನ್ನು ನೆಡಲು ಮುಂದಾಗಬೇಕು ಎಂದರು.
ಕುಮಾರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಗಂಗರಾಜು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಸಮಾಜ ಸೇವಕ ಪುನೀತ್ ನಾಗರಾಜ್, ನಿವೃತ್ತ ಅಂಚೆ ಇಲಾಖೆ ನೌಕರ ಪರಮಶಿವಪ್ಪ, ಕೃಷಿ ಮೇಲ್ವಿಚಾರಕ ನಾಗರಾಜ್, ಸೇವಾ ಪ್ರತಿನಿಧಿಗಳಾದ ಕೃಷ್ಣಮೂರ್ತಿ, ಅಂಬುಜಾ, ಶೌರ್ಯ ಘಟಕ, ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರು, ಶಿಕ್ಷಕರು ಸೇರಿದಂತೆ ಇತರರಿದ್ದರು.