ಶ್ರೀ ಜೇನುಕಲ್ಲು ಸಿದ್ದೇಶ್ವರರಸ್ವಾಮಿ ಭಾವಚಿತ್ರ.
ಅರಸೀಕೆರೆ: ತಾಲೂಕಿನ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ರಥೋತ್ಸವವು ಏ.3ರಿಂದ 4ರವರೆಗೆ ಜರುಗಲಿದೆ.
ಏ.2ರಂದು ಬೆಳಗ್ಗೆ ಹುಣ್ಣಿಮೆ ಅಂಗವಾಗಿ ಬೆಟ್ಟದ ಮೇಲೆ ಧ್ವಜಾರೋಹಣ, ಅಂಕುರಾರ್ಪಣೆ, ನೂರೊಂದೆಡೆ ಸೇವೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ. ಸಂಜೆ 7 ಗಂಟೆಗೆ ಬಸವೇಶ್ವರಸ್ವಾಮಿ ಉತ್ಸವ, ಗದ್ದುಗೆ ಮಂಟಪದಲ್ಲಿ ಸಾಮ್ರಾಜ್ಯೋತ್ಸವ, ಹುಲಿವಾಹನ, ಸೂರ್ಯಮಂಡಲೋತ್ಸವ, ಬೆಳ್ಳಿಪಲ್ಲಕ್ಕಿ ಉತ್ಸವ, ಬಿಲ್ವ ವೃಕ್ಷೋತ್ಸವ, ಹರಕೆ ತೀರಿಸುವವರಿಗೆ ಬಾಯಿಬೀಗ, ಚಂದ್ರ ಮಂಡಲೋತ್ಸವ, ಅಗ್ನಿಕುಂಡ ಸೇವೆ ಹಾಗೂ ಕೆಂಚಮ್ಮನವರ ಸನ್ನಿಧಿಯಲ್ಲಿ ಗುಗ್ಗಳಸೇವೆ ನೆರವೇರಲಿದೆ.
3ರಂದು ಬೆಳಗ್ಗೆ ಮಹಾಮಂಗಳಾರತಿ ನಂತರ 7ರಿಂದ 8 ಗಂಟೆಯವರೆಗೆ ರಥೋತ್ಸವ ನಡೆಯಲಿದೆ. ಬಳಿಕ ಉಯ್ಯಲೆ ಸೇವೆಯೊಂದಿಗೆ ಮಹಾಮಂಗಳಾರತಿ ಮಾಡಲಾಗುವುದು. 4ರಂದು ಮಧ್ಯಾಹ್ನ 2 ಗಂಟೆಯಿಂದ ಪಲ್ಲಕ್ಕಿ ಉತ್ಸವ, ಜೋಳಿಗೆ ಸೇವೆ ನಡೆಯಲಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ದಿನವಿಡೀ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರ ಅನುಕೂಲಕ್ಕೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.