ಅರಸೀಕೆರೆ ಗ್ರಾಮಾಂತರ ತಾಲೂಕು ಜಾವಗಲ್ ಗ್ರಾಮದ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. 
ಹಾಸನ

ದೊಡ್ಡಮ್ಮ, ಕರಿಯಮ್ಮ ಜಾತ್ರೆ ಸಂಪನ್ನ

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಜಾವಗಲ್ ಗ್ರಾಮದ ದೊಡ್ಡಮ್ಮ, ಕರಿಯಮ್ಮ (ಮುದಿ ಮಾರಮ್ಮ) ಜಾತ್ರಾ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು.
ಗುರುವಾರ ಅಮ್ಮನವರಿಗೆ ವಿಶೇಷ ದೀಪಾರತಿ ನೇರವೇರಿಸಲಾಯಿತು. ಮಹಿಳೆಯರು, ಹೆಣ್ಣು ಮಕ್ಕಳು ಆರತಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮೂಲ ಸ್ಥಾನಕ್ಕೆ ತಲುಪಿ ಉತ್ಸವ ಮೂರ್ತಿಗೆ ದೀಪಾರತಿ ಮಾಡಿದರು. ಶುಕ್ರವಾರ ಬೆಳಗ್ಗೆಯಿಂದ ರಥ ಸ್ವಚ್ಛಗೊಳಿಸಿ ಹೊಸಬಟ್ಟೆ ತೊಡಿಸಿ ಹೂವು, ಸೇಬು, ಮೊಸುಂಬಿ ಹಣ್ಣಿನ ಹಾರದೊಂದಿಗೆ ರಥ ಸಿದ್ಧಪಡಿಸಲಾಯಿತು.
ನಂತರ ಉತ್ಸವ ಮೂರ್ತಿಗಳಿಗೆ ಹೂವಿನ ಅಲಂಕಾರ ಮಾಡಿ ವೀರಭದ್ರಸ್ವಾಮಿ, ಕೆಂಚಪ್ಪ ದೇವರಿಗೆ ಹೊಂಬಾಳೆ ಮುಡಿಸಿ ಅಲಂಕಾರಗೊಳಿಸಲಾಯಿತು. ದೊಡ್ಡಮ್ಮ, ಕರಿಯಮ್ಮ ಹಾಗೂ ಪ್ಲೇಗಿನಮ್ಮನವರ ಅಡ್ಡಪಲ್ಲಕ್ಕಿ ಕುಣಿತ ಗಮನಸೆಳೆಯಿತು. ಮೂರು ದೇವತೆಯರನ್ನು ರಥಕ್ಕೆ ಪೂಜಾ ವಿಧಾನದೊಂದಿಗೆ ತೇರಿಗೆ ಕೂರಿಸಿ ಮಂಗಳಾರತಿ ನೇರವೇರಿಸಲಾಯಿತು. ವೀರಭದ್ರಸ್ವಾಮಿ, ಕೆಂಚಪ್ಪನವರ ಚೋಮನ ಕುಣಿತ ಪ್ರಾರಂಭಿಸಿ ತೇರು ಬೀದಿಗೆ ತರಲಾಯಿತು. ಪೂಜೆ ಸಲ್ಲಿಸಿದ ಬಳಿಕ ರಥೊತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ರಥವನ್ನು ಎಳೆದರು.
ಗ್ರಾಮದ ಯುವಕರು, ಹಿರಿಯರು ಕರಡೆ ವಾದ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಕರಿಯಮ್ಮ ದೇವಿ ದಾಸೋಹ ಸಮಿತಿಯಿಂದ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.