ಪ್ರೀತಂ ಗೌಡ 
ಹಾಸನ

ಕ್ಷೇತ್ರದಲ್ಲಿ ಎಷ್ಟು ಕೆಲಸ ಮಾಡಿದ್ದೇನೆಂಬುದು ಮುಖ್ಯ

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರದಲ್ಲಿ ಎಷ್ಟು ಕೆಲಸ ಮಾಡಿದ್ದೇನೆಂಬುದು ಮುಖ್ಯ
  • ಶಾಸಕ ಸ್ವರೂಪ್ ಪ್ರಕಾಶ್‌ಗೆ ಕುಟುಕಿದ ಮಾಜಿ ಶಾಸಕ ಪ್ರೀತಂ ಜೆ.ಗೌಡ
ಹಾಸನ: ವಿಧಾನಸಭಾ ಚುನಾವಣೆಗೆ ಇನ್ನೂ ಎರಡುಕಾಲು ವರ್ಷ ಬಾಕಿ ಇರುವಾಗಲೇ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಸಂಬಂಧ ರಾಜಕೀಯ ಮೇಲಾಟ ಪ್ರಾರಂಭವಾಗಿದೆ.
ಕೆಲ ದಿನಗಳ ಹಿಂದೆ ತಮ್ಮ ಕೆಲಸ ಕಾರ್ಯಗಳ ಬಗ್ಗೆ ಮಾಜಿ ಶಾಸಕ ಪ್ರೀತಂ ಜೆ.ಗೌಡ ಮಾಡಿದ್ದ ಆರೋಪಗಳಿಗೆ, ಮುಂದೆ ಟಿಕೆಟ್ ಕೈ ತಪ್ಪುವ ಭೀತಿಯಿಂದ ಹೀಗೆಲ್ಲ ಮಾತನಾಡಿದ್ದಾರೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಕುಟುಕಿದ್ದರು.
ಈ ಸಂಬಂಧ ಸೋಮವಾರ ಮಾಜಿ ಶಾಸಕ ಪ್ರೀತಂ ಜೆ. ಗೌಡ ಪ್ರತಿಕ್ರಿಯಿಸಿ, ಕ್ಷೇತ್ರದಲ್ಲಿ ಎಷ್ಟು ದಿನ ಇದ್ದೆ ಅನ್ನೋದು ಮುಖ್ಯವಲ್ಲ, ಎಷ್ಟು ಕೆಲಸ ಮಾಡಿದ್ದೀಯಾ ಎನ್ನುವುದು ಮುಖ್ಯ. ಅವರು ಬಿಸಿ ರಕ್ತದ ಕಾರಣಕ್ಕೆ ಮಾತನಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.
ಮೊದಲು ಜನರ ಪರವಾಗಿ ಕೆಲಸ ಮಾಡಲಿ. ಎನ್‌ಡಿಎ ಒಕ್ಕೂಟ ಇದೆಯೆಂದು ಯಾವುದೇ ಕೆಲಸ ಮಾಡದಿದ್ದರೆ ಜನರ ಆಕ್ರೋಶಕ್ಕೆ ಗುರಿಯಾದರೆ ನಾನೇ ಅಭ್ಯರ್ಥಿ ಆಗ್ತೇನೆ ಎಂದರು.
ಅವರ ನೆಗೆಟಿವ್ ನಡೆ, ನನಗೆ ಇಂಪ್ಯಾಕ್ಟ್ ಆಗಬಾರದು. ಸಹೋದರ, ಸ್ನೇಹಿತ ಶಾಸಕರಿಗೆ ಮನವಿ ಮಾಡುತ್ತೇನೆ. ಎನ್‌ಡಿಎಗೆ ವಿರೋಧ ಬರುವ ರೀತಿಯಲ್ಲಿ ನಿಮ್ಮ ದಿನನಿತ್ಯದ ಚಟುವಟಿಕೆ ಇರಬಾರದು ಎಂದು ಕಿವಿಮಾತು ಹೇಳಿದರು.
ಮುಂದೆ ನಾನು ಅಭ್ಯರ್ಥಿ ಆಗುವುದರಿಂದ ಕಾಳಜಿ ಜಾಸ್ತಿ, ಅವರು ಅಭ್ಯರ್ಥಿಯಾದರೆ ನಾವೆಲ್ಲ ಸೇರಿ ಕೆಲಸ ಮಾಡ್ತೀವಿ. ನಮ್ಮಿಬ್ಬಿರನ್ನು ಬಿಟ್ಟು ಬೇರೆಯವರನ್ನು ಅಭ್ಯರ್ಥಿ ಮಾಡಬಹುದು ಎಂದ ಪ್ರೀತಂ ಗೌಡ, ನನ್ನ ಬಗ್ಗೆ ಆಳ-ಅಗಲ ಗೊತ್ತಿಲ್ಲದವರು ಮಾತಾಡ್ತಾರೆ. ನನ್ನ ಶಕ್ತಿ ಏನು ಎಂದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಗೊತ್ತು. 2023ರಲ್ಲಿ ಪ್ರೀತಂಗೌಡ ಬೇಡ ಅಂದ್ರು, ಅದಕ್ಕೆ ರೆಸ್ಟ್ ಮಾಡ್ತಿದ್ದೀನಿ ಎಂದು ಪ್ರತಿಕ್ರಿಯಿಸಿದರು.
ಶ್ವೇತಪತ್ರ ಹೊರಡಿಸಲು ಆಗ್ರಹ: ಗೃಹಲಕ್ಷ್ಮೀ ಯೋಜನೆ ಹಣ ದುರುಪಯೋಗ ವಿಚಾರವಾಗಿ ಮಾತನಾಡಿದ ಅವರು, ಬೆಳಗಾಂ ಅಧಿವೇಶನದಲ್ಲಿ ನಮ್ಮ ಶಾಸಕರಾದ ಮಹೇಶ್ ಟೆಂಗಿನಕಾಯಿ ಕೇಳಿದ ಪ್ರಶ್ನೆಗೆ ಇನ್ನೂ ಉತ್ತರ ಕೊಟ್ಟಿಲ್ಲ. ಬರೀ ತೇಪೆ ಹಚ್ಚುವ ಕೆಲಸ ಆಗಿದೆಯೇ ಹೊರತು ನಿರ್ದಿಷ್ಟ ಉತ್ತರ ಬಂದಿಲ್ಲ. ಸರ್ಕಾರ ಸಿಎಜಿಗೆ ದಾಖಲೆ ಕೊಟ್ಟು ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದರು.
ಮುಂದೆ ಜನರು ಮಾತನಾಡುವ ಮುಂಚೆ ಶ್ವೇತಪತ್ರ ಹೊರಡಿಸಲಿ. ಅರ್ಹರನ್ನು ಬಿಟ್ಟು ಬೇರೆಯವರಿಗೆ ಹಣ ಹೋಗಿದೆ. ಇದು ಅಕ್ಷ್ಯಮ್ಯ ಅಪರಾಧ. ಮುಂದಿನ ದಿನಗಳಲ್ಲಿ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ಎಚ್ಚರಿಸಿದರು.
ತಪ್ಪು ಮಾಡಿದವರಿಗೆ ಶಿಕ್ಷೆ:
ಅಡ್ಡ ಮತದಾನದ ವರದಿ ಆಂತರಿಕವಾದುದು, ಅದನ್ನು ಬಹಿರಂಗಪಡಿಸುವಂತಿಲ್ಲ. ರಾಜ್ಯಾಧ್ಯಕ್ಷರು ರಾಷ್ಟ್ರೀಯ ಅಧ್ಯಕ್ಷರಿಗೆ ತಲುಪಿಸುತ್ತಾರೆ. ಸತ್ಯಾಸತ್ಯತೆ ತಿಳಿಸುವ ಕೆಲಸವನ್ನು ಸಿ.ಟಿ.ರವಿ ಅವರ ತಂಡ ಮಾಡಿದೆ. ಆಂತರಿಕವಾಗಿ ಇದನ್ನು ಬಗೆಹರಿಸಿಕೊಳ್ಳುತ್ತೇವೆ. ಯಾರೇ ಉಪ್ಪು ತಿಂದಿದ್ದರೂ ನೀರು ಕುಡಿದೇ ಕುಡಿಯುತ್ತಾರೆ. ಆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಮಾಡ್ತಾರೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದರು.