- ಕೃಷಿ ನಷ್ಟಕ್ಕೆ ಪರಿಹಾರ ನೀಡುವುದು ರಾಜ್ಯದ ಜವಾಬ್ದಾರಿ
- ಸಂಸದ ಶ್ರೇಯಸ್ ಎಂ.ಪಟೇಲ್ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರ
ಹಾಸನ: ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ತೆಂಗು ಬೆಳೆ ನಾಶವಾಗಿ ತೀವ್ರ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಕೇಂದ್ರ ಸರ್ಕಾರ ತಕ್ಷಣ ‘ವಿಶೇಷ ಪರಿಹಾರ’ ನೀಡಬೇಕೆಂದು ಹಾಸನ ಸಂಸದ ಶ್ರೇಯಸ್ ಎಂ.ಪಟೇಲ್ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ನೇರ ಉತ್ತರ ನೀಡಿದ್ದು, ಕೃಷಿ ನಷ್ಟಕ್ಕೆ ಪರಿಹಾರ ನೀಡುವುದು ರಾಜ್ಯಗಳ ಜವಾಬ್ದಾರಿ ಎಂದು ಹೇಳುವ ಮೂಲಕ ಕೈತೊಳೆದುಕೊಂಡಿದೆ.
ಲೋಕಸಭೆಯಲ್ಲಿ ರೈತಪರ ದನಿ ಎತ್ತಿದ ಸಂಸದ ಶ್ರೇಯಸ್ ಪಟೇಲ್ ಅವರು ಜಿಲ್ಲೆಯ ಪ್ರಮುಖ ತೆಂಗು ಬೆಳೆಯುವ ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ಒಟ್ಟು 1.18 ಲಕ್ಷ ಹೆಕ್ಟೇರ್ ಪ್ರದೇಶವು ರುಗೋಸ್ ವೈಟ್‌ಫ್ಲೈ ಮತ್ತು ಇತರ ರೋಗಗಳಿಂದ ತೀವ್ರ ಹಾನಿಗೊಳಗಾಗಿದೆ ಎಂಬುದನ್ನು ಸದನದ ಗಮನಕ್ಕೆ ತಂದರು. ಈ ನಷ್ಟದಿಂದ ರೈತರು ಬದುಕು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ಕೇಂದ್ರ ಸರ್ಕಾರದಿಂದ ವಿಶೇಷ ಹಣಕಾಸಿನ ನೆರವು ನೀಡಬೇಕಿದೆ ಎಂದು ಒತ್ತಾಯಿಸಿದರು.
ಸಂಸದರ ಈ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕೃಷಿ ಕ್ಷೇತ್ರ ಮತ್ತು ಬೆಳೆ ನಷ್ಟಕ್ಕೆ ಪರಿಹಾರ ನೀಡುವುದು ರಾಜ್ಯ ಸರ್ಕಾರದ ಪ್ರಾಥಮಿಕ ಜವಾಬ್ದಾರಿ. ರಾಜ್ಯ ಸರ್ಕಾರವು ತನ್ನಲ್ಲಿ ಲಭ್ಯವಿರುವ ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ಪರಿಹಾರ ನಿಧಿ) ಹಣವನ್ನೇ ಬಳಸಿ ಮೊದಲು ರೈತರಿಗೆ ನೆರವಾಗಬೇಕು. ನಷ್ಟವು ಅತಿ ದೊಡ್ಡದಾಗಿದ್ದರೆ, ಅದನ್ನು ‘ತೀವ್ರ ಸ್ವರೂಪದ ವಿಪತ್ತು’ ಎಂದು ಪರಿಗಣಿಸಿ ಎನ್‌ಡಿಆರ್‌ಎಫ್(ರಾಷ್ಟ್ರೀಯ ವಿಪತ್ತು ನಿಧಿ) ಅಡಿಯಲ್ಲಿ ಸಹಾಯ ಕೋರಿ ರಾಜ್ಯವೇ ಕೇಂದ್ರಕ್ಕೆ ಸರಿಯಾದ ಪ್ರಸ್ತಾವನೆ ಕಳುಹಿಸಬೇಕು. ಅಂತಹ ಪ್ರಸ್ತಾವನೆ ಬಂದಾಗ ಮಾತ್ರ ಕೇಂದ್ರ ಸರ್ಕಾರವು ಸಹಾಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವರು ತಿಳಿಸಿದರು.
ಸಂಸದ ಶ್ರೇಯಸ್ ಪಟೇಲ್ ಅವರ ಪ್ರಯತ್ನದ ನಡುವೆಯೂ, ಕೇಂದ್ರ ಸರ್ಕಾರವು ನೇರವಾಗಿ ‘ವಿಶೇಷ ಪರಿಹಾರ’ ಘೋಷಣೆ ಮಾಡಲು ನಿರಾಕರಿಸಿದ ಕಾರಣ, ತಕ್ಷಣದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದ ಹಾಸನದ ತೆಂಗು ಬೆಳೆಗಾರರಿಗೆ ಕೇಂದ್ರದ ಈ ಉತ್ತರದಿಂದ ನಿರಾಸೆಯಾಗಿದೆ. ಪರಿಹಾರ ಸಿಗಬೇಕಾದರೆ, ರಾಜ್ಯ ಸರ್ಕಾರವು ತುರ್ತಾಗಿ ಸೂಕ್ತ ಪ್ರಸ್ತಾವನೆ ಕಳುಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.