ಹಾಸನಾಂಬ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಪದಾಧಿಕಾರಿಗಳು, ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರ ಸಮಾವೇಶದಲ್ಲಿ ಗಣ್ಯರು ಭಾಗವಹಿಸಿದ್ದರು. ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ರಂಗೇಗೌಡ, ಎಸ್.ಎಂ.ಆನಂದಪ್ಪ, ಶ್ರೀನಿವಾಸ್, ಬಿ.ಪಿ.ಕೃಷ್ಣೇಗೌಡ ಇತರರು ಇದ್ದರು. 
ಹಾಸನ

ನಿವೃತ್ತರ ಸಮಸ್ಯೆ ಬಗೆಹರಿಸುವುದು ಸರ್ಕಾರದ ಕರ್ತವ್ಯ

ಹಾಸನ: ನಿವೃತ್ತ ನೌಕರರ ಸಮಸ್ಯೆಗಳನ್ನು ಬಗೆಹರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಈ ಕುರಿತು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಗಮನ ಸೆಳೆಯೋಣ ಎಂದು ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಪದಾಧಿಕಾರಿಗಳು, ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರ ಸಮಾವೇಶದಲ್ಲಿ ಮಾತನಾಡಿ, ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಆದ ನಂತರವೂ ಅನೇಕ ಬೇಡಿಕೆ, ಸಮಸ್ಯೆಗಳಿರುತ್ತವೆ. ಅವುಗಳನ್ನು ಬಗೆಹರಿಸುವುದು ಎಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ನೌಕರರ ಸಂಘದ ರಾಜ್ಯ ಅಧ್ಯಕ್ಷ ಕೆ.ಭೈರಪ್ಪ, ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ನಿವೃತ್ತ ನೌಕರರು ಮತ್ತು 1 ಲಕ್ಷಕ್ಕೂ ಅಧಿಕ ಪಿಂಚಣಿದಾರರಿದ್ದು, ಅವರ ಅನೇಕ ಸಮಸ್ಯೆಗಳು ಇನ್ನು ಬಗೆಹರಿಯದೆ ಉಳಿದಿವೆ ಎಂದು ಹೇಳಿದರು.
ನಿವೃತ್ತ ನೌಕರರು ಹಾಗೂ ಪಿಂಚಣಿದಾರರಿಗೆ ಆರೋಗ್ಯ ಭಾಗ್ಯ ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕು. ಕಾಲಮಾನಕ್ಕೆ ತಕ್ಕಂತೆ ನಿವೃತ್ತಿ ವೇತನ ಪರಿಷ್ಕರಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಇದೇ ವೇಳೆ ಸಂಧ್ಯಾಕಿರಣ ಯೋಜನೆ ಜಾರಿಗೆ ತರಬೇಕು, ವೈದ್ಯಕೀಯ ಚಿಕಿತ್ಸೆಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು. 7ನೇ ವೇತನ ಆಯೋಗದ ವರದಿಯಲ್ಲಿ ನಿವೃತ್ತ ನೌಕರರಿಗೆ ಸೂಕ್ತ ಆರ್ಥಿಕ ಸೌಲಭ್ಯ ಕಲ್ಪಿಸಬೇಕು. 70-80 ವರ್ಷದ ನಿವೃತ್ತ ನೌಕರರಿಗೆ ಶೇ.10ರಷ್ಟು ಹೆಚ್ಚುವರಿ ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಪಿಂಚಣಿದಾರರಿಗೆ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರುವುದರ ಜತೆಗೆ, ಶವಸಂಸ್ಕಾರಕ್ಕೆ ಕನಿಷ್ಠ 10 ಸಾವಿರ ರೂ. ನೆರವು ನೀಡಬೇಕು. ಈ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ಎಲ್ಲ ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಮಾವೇಶದಲ್ಲಿ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು, ನಿವೃತ್ತ ನೌಕರರು ಹಾಗೂ ಪಿಂಚಣಿದಾರರು ತಮ್ಮ ಸಮಸ್ಯೆ ಮತ್ತು ಬೇಡಿಕೆ ಕುರಿತು ಪ್ರಸ್ತಾಪಿಸಿದರು. ಸಮಾವೇಶದಲ್ಲಿ ಮೈಸೂರು ವಿಭಾಗದ 8 ಜಿಲ್ಲೆಗಳ ನಿವೃತ್ತ ನೌಕರರು ಹಾಗೂ ಪಿಂಚಣಿದಾರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅನಂತರಾಮು, ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಖಜಾಂಚಿ ಎಸ್.ಎಂ. ಆನಂದಪ್ಪ, ಉಪಾಧ್ಯಕ್ಷ ಶ್ರೀನಿವಾಸ್, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಕೃಷ್ಣೇಗೌಡ, ಉಪಾಧ್ಯಕ್ಷ ಕೆ.ಎಂ.ಶ್ರೀನಿವಾಸ್ ಇತರರಿದ್ದರು.