ಹಾಸನದ ಜಿಲ್ಲಾ ನ್ಯಾಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ವಾಟರ್ ಫಾರ್ ವಾಯ್ಸ ಲೆಸ್ ಇವರ ಆಶ್ರಯದಲ್ಲಿ ವಿಶ್ವಜಲ ದಿನದ ಅಂಗವಾಗಿ ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ನ್ಯಾಯಾಧೀಶೆ ಮಂಜುಳಾ, ಕಾರ್ಲೆ ಮೊಗಣ್ಣಗೌಡ, ಬಿ.ಎಂ. ಶೈಲಾ ಇತರರು ಇದ್ದರು.
- ಪ್ರಾಣಿ-ಪಕ್ಷಿಗಳ ರಕ್ಷಣೆ ನಮ್ಮ ಕರ್ತವ್ಯ
- ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶೆ ಮಂಜುಳಾ ಅಭಿಪ್ರಾಯ
- ವಿಶ್ವ ಜಲ ದಿನ
ಹಾಸನ: ನೀರು ಅಮೂಲ್ಯವಾಗಿದ್ದು, ಇದರಿಂದ ಜೀವ ಉಳಿಸಬಹುದು. ಮನುಷ್ಯ ತಾನು ಬದುಕುವ ಜತೆಗೆ ಪ್ರಾಣಿ-ಪಕ್ಷಿಗಳಿಗೂ ಕೂಡ ದಯೆ ತೋರಬೇಕು. ತೀವ್ರಗೊಳ್ಳುತ್ತಿರುವ ಬೇಸಿಗೆ, ಒಣಗುತ್ತಿರುವ ನೀರಿನ ಮೂಲಗಳು, ನೀರಿಗಾಗಿ ಅಲೆದಾಡುವ ಮೂಕ ಜೀವಿಗಳು ಈ ವಾಸ್ತವದ ನಡುವೆಯೇ ಮಾನವೀಯತೆ ಬೆಳೆಸಿಕೊಳ್ಳುವುದು ಮುಖ್ಯ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶೆ ಮಂಜುಳಾ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ 3ನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ವಾಟರ್ ಫಾರ್ ವಾಯ್ಸ ಲೆಸ್ ಸಂಸ್ಥೆಯ ಸಹಯೋಗದಲ್ಲಿ ಗುರುವಾರ ವಿಶ್ವ ಜಲ ದಿನದ ಅಂಗವಾಗಿ ಆಯೋಜಿಸಿದ್ದ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೀರು ಮನುಷ್ಯರ ಅವಶ್ಯಕತೆ ಮಾತ್ರವಲ್ಲ. ಪ್ರಾಣಿ-ಪಕ್ಷಿಗಳ ಬದುಕಿನ ಮೂಲವೂ ಆಗಿದೆ. ನಾವು ದಿನನಿತ್ಯ ಜೀವನದಲ್ಲಿ ನೀರನ್ನು ಹಲವು ರೀತಿಯಲ್ಲಿ ಬಳಸುತ್ತೇವೆ. ಆದರೆ, ನಮ್ಮ ಸುತ್ತಲಿನ ಮೂಕ ಜೀವಿಗಳಿಗೆ ನೀರು ಸಿಗುತ್ತಿದೆಯೇ ಎಂಬುದನ್ನು ಯೋಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಪಕ್ಷಿಗಳು, ಪ್ರಾಣಿಗಳ ನೀರಿಗಾಗಿ ಮನೆಗಳ ಮುಂದೆ, ತೋಟಗಳಲ್ಲಿ, ರಸ್ತೆ ಬದಿಗಳಲ್ಲಿ ಸಣ್ಣ ಪಾತ್ರೆಗಳಲ್ಲಿ ನೀರು ಇಡುವುದು ಸಹ ಒಂದು ಮಹತ್ವದ ಸೇವೆಯಾಗಿದೆ. ಒಂದು ಪಾತ್ರೆ ನೀರು ಇಡುವುದರಿಂದ ಒಂದು ಜೀವ ಉಳಿಯಬಹುದು, ಇದು ನಮ್ಮ-ಸಣ್ಣ ಪ್ರಯತ್ನ, ಆದರೆ ಅದರ ಪರಿಣಾಮ ಬಹಳ ದೊಡ್ಡದು ಎಂದರು.
ಮಾನವೀಯತೆ ಮಾತಿನಲ್ಲಿ ಮಾತ್ರವಲ್ಲ, ಕೃತಿಯಲ್ಲಿ ಕಾಣಬೇಕು. ಪ್ರಾಣಿ-ಪಕ್ಷಿಗಳಿಗೂ ಬದುಕುವ ಹಕ್ಕಿದೆ ಎಂಬ ಅರಿವು ಸಮಾಜದಲ್ಲಿ ಬೇರೂರಬೇಕು. ಮೂಕ ಜೀವಿಗಳು ತಮ್ಮ ನೋವನ್ನು ಹೇಳಿಕೊಳ್ಳಲಾರವು. ಆದ್ದರಿಂದ ಅವರ ಪರವಾಗಿ ನಾವು ಯೋಚಿಸಬೇಕು. ಅವರ ರಕ್ಷಣೆಗೆ ಮುಂದಾಗುವುದು ನಮ್ಮ ನೈತಿಕ ಕರ್ತವ್ಯ ಎಂದು ಹೇಳಿದರು.
ಇದೇ ವೇಳೆ, ನೀರಿನ ಮೌಲ್ಯವನ್ನು ನೆನಪಿಸಿದ ಅವರು, ನೀರನ್ನು ವ್ಯರ್ಥ ಮಾಡುವ ಪ್ರತಿಯೊಂದು ಕ್ಷಣವೂ ಭವಿಷ್ಯಕ್ಕೆ ಅಪಾಯದ ಸೂಚನೆ. ನಾವು ಬಳಸುವ ಪ್ರತಿಯೊಂದು ಹನಿ ನೀರಿಗೂ ಬೆಲೆ ಇದೆ. ಅದನ್ನು ಜವಾಬ್ದಾರಿಯುತವಾಗಿ ಬಳಸಬೇಕು ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಕಾರ್ಲೆ ಮೊಗಣ್ಣಗೌಡ, 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಂ.ಶೈಲಾ, ಕೌಟಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಮೊಹಮ್ಮದ್ ಅಶ್ರಫ್ ಆರಿಸ್, ಎಫ್‌ಟಿಎಸ್‌ಸಿ-1 ಅಧಿಕ ಜಿಲ್ಲಾ ನ್ಯಾಯಾಧೀಶ ಎಚ್.ಎಂ.ದೇವರಾಜು, ಸಾರ್ವಜನಿಕ ಸಂಪರ್ಕಾಧಿಕಾರಿ ಆಮಿ ಪ್ರಪುಲ್ ಮಭನ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಕೆ.ದಾಕ್ಷಾಯಿಣಿ ಇತರರು ಇದ್ದರು.