ಅರಕಲಗೂಡಿನಲ್ಲಿ ಆಯೋಜಿಸಿದ್ದ ಪಠ್ಯಾಧಾರಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್ ಅವರನ್ನು ಸನ್ಮಾನಿಸಲಾಯಿತು. ಕೆ.ಸಿ.ಸೌಮ್ಯಾ, ಕೆ.ಪಿ.ನಾರಾಯಣ, ರಂಗಸ್ವಾಮಿ ಇತರರಿದ್ದರು.  
ಹಾಸನ

ಭಯವಿಲ್ಲದೆ ಪರೀಕ್ಷೆ ಬರೆಯುವ ಮನೋಸ್ಥೈರ್ಯ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್ ಹೇಳಿಕೆ
ಅರಕಲಗೂಡು: ತರಗತಿ ಆರಂಭದ ಹಂತದಿಂದಲೇ ವಿದ್ಯಾರ್ಥಿಗಳು ಉತ್ತಮವಾಗಿ ಕಲಿಕಾ ಸಿದ್ಧತೆ ನಡೆಸುವ ಮೂಲಕ ಪರೀಕ್ಷೆಗಳನ್ನು ಭಯವಿಲ್ಲದೆ ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್ ಕಿವಿಮಾತು ಹೇಳಿದರು.
ನಿಧಾನಗತಿ ಕಲಿಕೆಯ ಸರ್ಕಾರಿ ಪ್ರೌಢಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಟ್ಟಣದ ಶಿಕ್ಷಕರ ಭವನದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಪಠ್ಯಾಧಾರಿತ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಎಂಬುದು ಶ್ರದ್ಧೆಗೆ ಒಲಿಯುವ ಸಾಧನವಾಗಿದೆ. ಫಲಿತಾಂಶ ಉತ್ತಮ ಗೊಳಿಸಲು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಸತತ ಪ್ರಯತ್ನ ನಡೆದಿದ್ದು ವಿದ್ಯಾರ್ಥಿಗಳು ಸಾಧನೆ ಮೂಲಕ ಗುರುದಕ್ಷಿಣೆ ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಮೂರನೆ ಸ್ಥಾನದಲ್ಲಿರುವ ತಾಲೂಕು ಮೊದಲ ಸ್ಥಾನಕ್ಕೆ ಏರುವಂತಾಗಬೇಕು. ಸರ್ಕಾರಿ ಶಾಲೆಯಲ್ಲಿ ಓದುವ 10ನೇ ತರಗತಿ ಪರೀಕ್ಷೆಯಲ್ಲಿ ಮೊದಲ ಸ್ಥಾನಗಳಿಸುವ ವಿದ್ಯಾರ್ಥಿಗೆ 15,000 ರೂ.ನಗದು ಬಹುಮಾನವನ್ನು ಪ್ರತಿ ವರ್ಷ ನೀಡುವುದಾಗಿ ಹೇಳಿದರು.
ತಹಸೀಲ್ದಾರ್ ಕೆ.ಸಿ.ಸೌಮ್ಯಾ ಮಾತನಾಡಿ, ಓದಿನ ಹಂತದಲ್ಲಿ ಕಾಲಹರಣ ಸಲ್ಲದು. ಒತ್ತಡಗಳಿಗೆ ಒಳಗಾಗದೆ ವಿದ್ಯಾರ್ಥಿಗಳು ಸಾಧನೆಯ ಕಡೆಗೆ ಗಮನ ಹರಿಸಬೇಕು. ಅಂಕಗಳನ್ನು ಗಳಿಸುವುದಷ್ಟಕ್ಕೆ ಸೀಮಿತರಾಗದೆ ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಹೇಳಿದರು.
ಬಿಇಒ ಕೆ.ಪಿ.ನಾರಾಯಣ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಧುಕರ್, ಕಾರ್ಯದರ್ಶಿ ಬೋರಣ್ಣಗೌಡ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ವಿವೇಕಾನಂದ ಇತರರಿದ್ದರು.